ತಿರುವನಂತಪುರ: ಚಿನ್ನ ಕಳ್ಳಸಾಗಣೆ ಪ್ರಕರಣದ ಎರಡನೇ ಆರೋಪಿ ಸ್ವಪ್ನಾ ಸುರೇಶ್ ಅವರೊಂದಿಗೆ ಸಂಬಂಧ ಹೊಂದಿದ್ದ ಆರೋಪದ ಮೇಲೆ ಅಮಾನತುಗೊಂಡ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿ ಎಂ.ಶಿವಶಂಕರ್ ಅವರನ್ನು ಮತ್ತೆ ನೇಮಕ ಮಾಡಲು ಮುಖ್ಯಮಂತ್ರಿಗಳು ಮುಂದಾಗಿರುವುದಾಗಿ ತಿಳಿದುಬಂದಿದೆ. ಈ ಬಗ್ಗೆ ಪರಿಶೀಲಿಸಲು ಮೂರು ಸದಸ್ಯರ ಸಮಿತಿಯನ್ನು ನೇಮಿಸಲಾಗಿದೆ.
ಮುಖ್ಯಮಂತ್ರಿಗಳ ಮುಖ್ಯ ಕಾರ್ಯದರ್ಶಿ ವಿಶ್ವಾಸ್ ಮೆಹ್ತಾ, ಕಾರ್ಮಿಕ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಸತ್ಯಜಿತ್ ರಾಜನ್ ಮತ್ತು ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಟಿ.ಕೆ.ಜೋಸ್ ಅವರನ್ನು ಎಸ್.ಶಿವಶಂಕರ್ ಅವರನ್ನು ಮರಳಿ ಹುದ್ದೆಗೇರಿಸುವ ನಿಟ್ಟಿನಲ್ಲಿ ಪರಿಶೀಲನೆಗೆ ನೇಮಕ ಮಾಡಲಾಗಿದೆ.
ಇದಕ್ಕೂ ಮೊದಲು ಕಸ್ಟಮ್ಸ್, ಎನ್.ಐ.ಎ. ಮತ್ತು ಇಡಿ ಮುಖ್ಯಮಂತ್ರಿಯ ಮಾಜಿ ಪ್ರಧಾನ ಕಾರ್ಯದರ್ಶಿಯನ್ನು ಗಂಟೆಗಳ ಕಾಲ ಪ್ರಶ್ನಿಸಿತ್ತು. ಶಿವಾಶಂಕರ್ ಅವರು ಸ್ವಪ್ನಾ ಸುರೇಶ್ ರೊಂದಿಗೆ ವೈಯಕ್ತಿಕ ಸಂಬಂಧವನ್ನು ಹೊಂದಿದ್ದಾರೆಂದು ಮಾತ್ರ ಒಪ್ಪಿಕೊಂಡಿದ್ದರು. ಆದರೆ ಯಾವುದೇ ಸಂಸ್ಥೆ ಶಿವಶಂಕರ್‍ಗೆ ಕ್ಲೀನ್ ಚಿಟ್ ನೀಡಿರಲಿಲ್ಲ.
ಮುಂದಿನ ವಾರ ಶಿವಶಂಕರ್ ಅವರನ್ನು ಮತ್ತೆ ಎನ್.ಐ.ಎ. ಪ್ರಶ್ನಿಸಲಿದೆ ಎಂಬ ವದಂತಿಗಳಿವೆ. ಈ ಎಲ್ಲದರ ಮಧ್ಯೆ, ಶಿವಶಂಕರ್ ಅವರನ್ನು ತರಾತುರಿಯಲ್ಲಿ ಮರಳಿ ಉದ್ಯೋಗಕ್ಕೆ ಸೇರಿಸಲು ಮುಖ್ಯಮಂತ್ರಿ ಮುಂದಾಗಿರುವುದು ಸಂಶಯಗಳಿಗೆ ಎಡೆಮಾಡಿದೆ. ಶಿವಶಂಕರ್ ಅವರ ಅಮಾನತಿಗೆ ಸಂಬಂಧಿಸಿದಂತೆ ಸರ್ಕಾರ ಇನ್ನೂ ದೂರು ನೀಡಿಲ್ಲ ಎಂದು ತಿಳಿದುಬಂದಿದೆ.
ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿಗಳೊಂದಿಗಿನ ಸಂಪರ್ಕಕ್ಕಾಗಿ ಅವರನ್ನು ಈ ಹಿಂದೆ ಸರ್ಕಾರ ಅಮಾನತುಗೊಳಿಸಿತ್ತು. ಪ್ರಸ್ತುತ ಪರಿಸ್ಥಿತಿಯಲ್ಲಿ ಮರಳಿ ಸೇರಿಸುವ ಅಗತ್ಯ ಸರ್ಕಾರಕ್ಕೆ ಇರಲಿಲ್ಲ. ಆದರೆ, ಈ ವಿಷಯದಲ್ಲಿ ಮುಖ್ಯಮಂತ್ರಿ ಯಾಕಿಷ್ಟು ಅವಸರದಲ್ಲಿದ್ದಾರೆ ಎಂಬುದು ಅನುಮಾನಕ್ಕೆ ಕಾರಣವಾಗಿದೆ. ಅಲ್ಲದೆ ರಾಜ್ಯ ಉನ್ನತ ಶಿಕ್ಷಣ ಸಚಿವರೂ ಪ್ರಕರಣದಲ್ಲಿ ಶಾಮೀಲಾಗಿ ಶುಕ್ರವಾರ ಇಡಿಯಿಂದ ಸಮಗ್ರ ತನಿಖೆಗೆ ಒಳಗಾಗಿರುವುದರ ಹೊತ್ತಲ್ಲಿ ರಾಜ್ಯಾಡಳಿತದ ಎಡ ಸರ್ಕಾರ ಹಲವು ಜನವಿರೋಧಿ ಉಪಕ್ರಮಗಳಲ್ಲಿ ಶಾಮೀಲಾಗಿರುವುದು ಒಂದೊಂದೇ ಹೊರಬೀಳುತ್ತಿದೆ.
ಇದೇ ವೇಳೆ ನಾಗರಿಕ ಸೇವಾ ಕಾಯ್ದೆಯ ಸೆಕ್ಷನ್ 3 (8) ಸಿ ಅಡಿಯಲ್ಲಿ ಇದು ಸಾಮಾನ್ಯ ಕ್ರಮ ಮಾತ್ರ ಎಂದು ಸರ್ಕಾರದ ಅಭಿಪ್ರಾಯ ವ್ಯಕ್ತಪಡಿಸಿದೆ.