ಎರ್ನಾಕುಳಂ: ಚಿನ್ನ ಕಳ್ಳಸಾಗಾಟ ಪ್ರಕರಣಕ್ಕೆ ಸಂಬಂಧಿಸಿ ಸಿಪಿಎಂ ಕೇರಳ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ, ಕೊಡಿಯೇರಿ ಬಾಲಕೃಷ್ಣನ್ ಅವರ ಪುತ್ರ ಬಿನೀಶ್ ಕೊಡಿಯೇರಿ ಅವರನ್ನು ಎನ್‍ಫೋರ್ಸ್‍ಮೆಂಟ್ ಡೈರೆಕ್ಟರೇಟ್(ಇಡಿ)ಕೊಚ್ಚಿಯ ಕಚೇರಿಯಲ್ಲಿ ನಿನ್ನೆ 11 ಗಂಟೆಗಳ ಸುಧೀರ್ಘ ವಿಚಾರಣೆ ಆರಂಭಿಸಿದೆ.
ವಿಚಾರಣೆಯಿಂದ ಆರು ದಿವಸಗಳ ಕಾಲ ವಿನಾಯಿತಿ ನೀಡುವಂತೆ ಬಿನೀಶ್ ಕೊಡಿಯೇರಿ ಕೇಳಿಕೊಂಡಿದ್ದರೂ, ಅಧಿಕಾರಿಗಳು ಈ ಬೇಡಿಕೆ ತಿರಸ್ಕರಿಸಿದ್ದರು. ಚಿನ್ನ ಕಳ್ಳಸಾಗಾಟದ ಹಿಂದಿನ ಬಿನಾಮಿ ಹವಾಲಾ ದಂಧೆಯ ಬಗ್ಗೆ ವಿಚಾರಣೆಗಾಗಿ ಬಿನೀಶ್ ಕೊಡಿಯೇರಿಯನ್ನು ವಿಚಾರಣೆಗೆ ಹಾಜರಾಗುವಂತೆ'ಇಡಿ'ಅಧಿಕಾರಿಗಳು ನೋಟೀಸು ನೀಡಿದ್ದರು. ಬಿನೀಶ್ ಕೊಡಿಯೇರಿಗೆ ಸಂಬಂಧಿಸಿದ ಸಂಸ್ಥೆಗಳನ್ನು ಕೇಂದ್ರೀಕರಿಸಿ ತನಿಖೆ ನಡೆಯಲಿದೆ. ತಿರುವನಂತಪುರದ ಯುಎಎಫ್‍ಎಕ್ಸ್ ಸೊಲ್ಯೂಶನ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯಿಂದ ತನಗೆ ಕಮಿಶನ್ ಲಭ್ಯವಾಗಿರುವುದಾಗಿ ಕೇರಳದ ಚಿನ್ನ ಸಾಗಾಟ ಪ್ರಕರಣದ ಪ್ರಮುಖ ರೂವಾರ ಸ್ವಪ್ನಾ ಸುರೇಶ್ ತಿಳಿಸಿದ್ದಳು. ಸಂಸ್ಥೆ ನಿರ್ದೇಶಕರಾದ ಅಬ್ದುಲ್ ಲತೀಫ್ ಹಾಗೂ ಬಿನೀಶ್ ಕೊಡಿಯೇರಿ ಜತೆ ನಿಕಟ ಸಂಪರ್ಕ ಹೊಂದಿರುವ ಬಗ್ಗೆ 'ಇಡಿ'ಗೆ ಮಾಹಿತಿ ಲಭಿಸಿತ್ತು. ಇದಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳು ವಿಚಾರಣೆ ನಡೆಸುತ್ತಿದ್ದಾರೆ.
ಜತೆಗೆ ಮಾದಕದ್ರವ್ಯ ಸಾಗಾಟಗಾರರೊಂದಿಗೆ ಚಿನ್ನ ಕಳ್ಳಸಾಗಾಟಗಾರರಿಗೆ ಸಂಪರ್ಕವಿರುವುದಾಗಿಯೂ ಇಡಿಗೆ ಮಾಹಿತಿ ಲಭಿಸಿದೆ.