ಕಾಸರಗೋಡು: ರಾಜ್ಯ ಸರಕಾರದ ಯತ್ನಗಳು ಆರೋಗ್ಯ ವಲಯದ ಅಭಿವೃದ್ಧಿಗೆ ಪೂರಕವಾಗಿವೆ ಎಂದು ಕಂದಾಯ ಸಚಿವ ಇ.ಚಂದ್ರಶೇಖರನ್ ನುಡಿದರು.
ಚೆಮ್ನಾಡಿನಲ್ಲಿ ಬುಧವಾರ ನಡೆದ ಟಾಟಾ ಕೋವಿಡ್ ಆಸ್ಪತ್ರೆಯ ಹಸ್ತಾಂತರ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೋವಿಡ್ ಸೋಂಕಿನ ಆರಂಭದ ಹಂತದಲ್ಲಿ ಕಾಸರಗೋಡು ಜಿಲ್ಲೆ ಅನುಭವಿಸಿದ ಸಮಸ್ಯೆಗಳ ಬಗ್ಗೆ ಮುಖ್ಯಮಂತ್ರಿ ಅವರ ಗಮನಕ್ಕೆ ತರಲಾಗಿತ್ತು. ಇದಕ್ಕೆ ಸ್ಪಂದಿಸಿದ ಅವರು ಸಮರೋಪಾದಿಯಲ್ಲಿ ಆಸ್ಪತ್ರೆಯೊಂದನ್ನು ಆರಂಭಿಸಲು ತಕ್ಷಣ ಆದೇಶ ಹೊರಡಿಸಿದ್ದರು. ಟಾಟಾ ಸಮೂಹ ಸಂಸ್ಥೆ ಈ ನಿಟ್ಟಿನಲ್ಲಿ ಕೈಜೋಡಿಸಿದ್ದು ಕೂಡ ಪೂರಕವಾಗಿತ್ತು. ಜಿಲ್ಲಾಧಿಕಾರಿ ಅವರ ನೇತೃತ್ವದಲ್ಲಿ ಜಾಗವನ್ನೂ ಪತ್ತೆ ಮಾಡಿ ನಿಗದಿಪಡಿಸಲಾಗಿತ್ತು. ಅನೇಕ ಸಂಘ-ಸಂಸ್ಥೆಗಳ ಬೆಂಬಲವೂ ಲಭಿಸಿತ್ತು. ಈ ನಿಟ್ಟಿನಲ್ಲಿ ಎಲ್ಲರಿಗೂ ಕೃತಜ್ಞತೆ ಸಲ್ಲಿಸುರುವುದಾಗಿ ಅವರು ನುಡಿದರು.