ವಾಷಿಂಗ್ಟನ್: ಜಗತ್ತಿನಲ್ಲಿರುವ ಒಟ್ಟಾರೆ ಕೋವಿಡ್ ವ್ಯಾಕ್ಸಿನ್ ಗಳ ಪೈಕಿ ಅರ್ಧದಷ್ಟು ಲಸಿಕೆಗಳು ಶ್ರೀಮಂತ ರಾಷ್ಟ್ರಗಳ ಪಾಲಾಗಿವೆ ಎಂದು ಹೇಳಲಾಗಿದೆ.
ಜಗತ್ತಿನ 213 ರಾಷ್ಟ್ರಗಳಲ್ಲಿ ಮರಣ ಮೃದಂಗ ಭಾರಿಸುತ್ತಿರುವ ಮಾರಕ ಕೊರೋನಾ ವೈರಸ್ ಕುರಿತಂತೆ ಸಿದ್ಧವಾಗುತ್ತಿರುವ ಲಸಿಕೆಗಳು ಶ್ರೀಮಂತ ದೇಶಗಳ ಪಾಲಾಗುತ್ತಿರುವ ಕುರಿತು ವೈದ್ಯಕೀಯ ಲೇಖನಗಳನ್ನು ಪ್ರಕಟಿಸುವ ಆಕ್ಸ್ ಫ್ಯಾಮ್ ಆತಂಕ ವ್ಯಕ್ತಪಡಿಸಿದೆ. ಪ್ರಸ್ತುತ ಕೊನೆಯ ಹಂತದ ಪ್ರಯೋಗಗಳಲ್ಲಿರುವ ಐದು ಪ್ರಮುಖ ಲಸಿಕೆಗಳ ಉತ್ಪಾದಕರು ನಡೆಸಿದ ಒಪ್ಪಂದಗಳನ್ನು ಸರ್ಕಾರೇತರ ಸಂಸ್ಥೆ ವಿಶ್ಲೇಷಿಸಿದ್ದು, ಜಾಗತಿಕ ಜನಸಂಖ್ಯೆಯ ಶೇ.13 ರಷ್ಟು ಜನಸಂಖ್ಯೆ ಇರುವ ಶ್ರೀಮಂತ ರಾಷ್ಟ್ರಗಳ ಒಂದು ಗುಂಪು ಈಗಾಗಲೇ ಭವಿಷ್ಯದ ಕೋವಿಡ್-19 ಲಸಿಕೆಗಳ ಅರ್ಧದಷ್ಟು ಪ್ರಮಾಣವನ್ನು ಖರೀದಿಸಿದೆ.
ಈ ಬಗ್ಗೆ ಆಕ್ಸ್ ಫ್ಯಾಮ್ ನ ರಾಬರ್ಟ್ ಸಿಲ್ವರ್ ಮನ್ ಅವರು ಮಾತನಾಡಿದ್ದು, ಜೀವ ಉಳಿಸುವ ಲಸಿಕೆಯ ಲಭ್ಯತೆ ನೀವು ಎಲ್ಲಿ ವಾಸಿಸುತ್ತೀರಿ ಅಥವಾ ಎಷ್ಟು ಹಣವನ್ನು ಹೊಂದಿದ್ದೀರಿ ಎಂಬುದರ ಮೇಲೆ ಅವಲಂಬಿತವಾಗಿರಬಾರದು. ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಯ ಅಭಿವೃದ್ಧಿ ಮತ್ತು ಅನುಮೋದನೆ ನಿರ್ಣಾಯಕವಾಗಿದ್ದು, ಲಸಿಕೆಗಳು ಲಭ್ಯವಿದೆಯೇ? ಮತ್ತು ಎಲ್ಲರಿಗೂ ಕೈಗೆಟುಕುವಂತೆಯೇ? ಎಂದು ಖಚಿತಪಡಿಸಿಕೊಳ್ಳುವುದು ಅಷ್ಟೇ ಮುಖ್ಯ ಎಂದು ಹೇಳಿದ್ದಾರೆ.
ಪ್ರಸ್ತುತ ಕೋವಿಡ್ ಚಿಕಿತ್ಸೆಯಲ್ಲಿ ಪರಿಣಾಮಕಾರಿ ಎಂದು ವಿಶ್ಲೇಷಿಸಿದ ಐದು ಲಸಿಕೆಗಳೆಂದರೆ ಅಸ್ಟ್ರಾಜೆನೆಕಾ, ಗಮಲೇಯಾ / ಸ್ಪುಟ್ನಿಕ್, ಮಾಡರ್ನಾ, ಫಿಜರ್ ಮತ್ತು ಸಿನೋವಾಕ್. ಈ ಲಸಿಕೆಗಳ ಒಟ್ಟಾರೆ ಉತ್ಪಾದನೆ 5.9 ಶತಕೋಟಿ ಡೋಸ್ ಗಳಾಗಿದ್ದು, ಈ ಪೈಕಿ 2.7 ಬಿಲಿಯನ್ (51 ಪ್ರತಿಶತ) ಡೋಸ್ ಗಳನ್ನು ಶ್ರೀಮಂತ ರಾಷ್ಟ್ರಗಳಾದ ಯುಎಸ್, ಯುಕೆ, ಯುರೋಪಿಯನ್ ಯೂನಿಯನ್, ಆಸ್ಟ್ರೇಲಿಯಾ, ಹಾಂಕಾಂಗ್ ಮತ್ತು ಮಕಾವ್, ಜಪಾನ್, ಸ್ವಿಟ್ಜರ್ಲೆಂಡ್, ಇಸ್ರೇಲ್ ಸೇರಿದಂತೆ ಅಭಿವೃದ್ಧಿ ಹೊಂದಿದ ದೇಶಗಳು ಖರೀದಿಸಲು ಒಪ್ಪಂದ ಮಾಡಿಕೊಂಡಿವೆ. ಉಳಿದ 2.6 ಬಿಲಿಯನ್ ಗಳನ್ನು ಭಾರತ, ಬಾಂಗ್ಲಾದೇಶ, ಬ್ರೆಜಿಲ್, ಚೀನಾ, ಇಂಡೋನೇಷ್ಯಾ ಮತ್ತು ಮೆಕ್ಸಿಕೊ ಸೇರಿದಂತೆ ಅಭಿವೃದ್ಧಿಶೀಲ ರಾಷ್ಟ್ರಗಳು ಖರೀದಿಸಿವೆ ಅಥವಾ ಖರೀದಿಸುವ ಭರವಸೆ ನೀಡಿವೆ.