ಮುಳ್ಳೇರಿಯ: ಬ್ರಹ್ಮ್ಯೆಕ್ಯರಾದ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿಯವರಿಗೆ ಕೋಟೂರು ಯಕ್ಷತೂಣೀರ ಸಂಪ್ರತಿಷ್ಠಾನದ ವತಿಯಿಂದ ನುಡಿನಮನ ಕಾರ್ಯಕ್ರಮ ಇತ್ತೀಚೆಗೆ ನಡೆಯಿತು. ಕೋವಿಡ್ ಮಾನದಂಡಗಳನ್ನು ಪಾಲಿಸಿ ಸಭೆ ಜರಗಿಸಲಾಯಿತು.
ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರ ಮನೆಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಸುಬ್ರಹ್ಮಣ್ಯ ಅಡ್ಕ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.
ಹಿರಿಯ ಯಕ್ಷಗಾನ ಭಾಗವತ ಹೊಸಮೂಲೆ ಗಣೇಶ ಭಟ್ ಉಪಸ್ಥಿತರಿದ್ದರು. ಸ್ವಾಮೀಜಿಯವರ ಪೂರ್ವಾಶ್ರಮದಿಂದಲೇ ಅವರ ಒಡನಾಡಿಯಾಗಿದ್ದು ಶ್ರೀ ಮಠದ ಎಲ್ಲಾ ಕಾರ್ಯಕ್ರಮಗಳಲ್ಲೂ ಮುಂಚೂಣಿಯಲ್ಲಿದ್ದ ಹಿರಿಯ ಯಕ್ಷಗಾನ ಕಲಾವಿದ ಅಡ್ಕ ಗೋಪಾಲಕೃಷ್ಣ ಭಟ್ಟರು ಗುರುಗಳ ಒಡನಾಟವನ್ನು ನೆನಪಿಸಿ ಕಾಸರಗೋಡಿನ ಸಾಹಿತ್ಯ, ಕಲಾ ಲೋಕಕ್ಕೆ ಅಗಲುವಿಕೆ ತುಂಬಲಾರದ ನಷ್ಟ ಎಂದು ನುಡಿದರು.
ಪ್ರತಿಷ್ಠಾನದ ಗೌರವಾಧ್ಯಕ್ಷ ಗೋವಿಂದ ಬಳ್ಳಮೂಲೆ, ಉಪಾಧ್ಯಕ್ಷ ರಾಘವೇಂದ್ರ ಭಟ್ ಉಡುಪುಮೂಲೆ, ಸಹಕಾರ್ಯದರ್ಶಿ ಡಾ. ಶಿವಕುಮಾರ್ ಅಡ್ಕ, ಅನುಪಮಾ ರಾಘವೇಂದ್ರ ಉಡುಪುಮೂಲೆ ನುಡಿನಮನಗಳನ್ನು ಅರ್ಪಿಸಿದರು. ಕೋಶಾಧಿಕಾರಿ ಕೃಷ್ಣ ಭಟ್ ಅಡ್ಕ ಸ್ವಾಗತಿಸಿ, ಕಾರ್ಯದರ್ಶಿ ಮುರಳಿಕೃಷ್ಣ ಸ್ಕಂದ ವಂದಿಸಿದರು.