ಕಾಸರಗೋಡು : ಕಾಸರಗೋಡು ಜಿಲ್ಲೆಯಲ್ಲಿ ಕೋವಿಡ್ ಸೋಂಕು ತೀವ್ರವಾಗಿದ್ದು, ಸಾರ್ವಜನಿಕರು ಜಾಗ್ರತೆ ಪಾಲಿಸಬೇಕಾದುದು ಅಗತ್ಯ ಎಂದು ಜಿಲ್ಲಾ ವೈದ್ಯಾಧಿಕಾರಿ ಡಾ.ಎ.ವಿ.ರಾಮದಾಸ್ ತಿಳಿಸಿರುವರು.
ಕಾಸರಗೋಡು ಜಿಲ್ಲೆಯಲ್ಲಿ ಗುರುವಾರ ಒಂದೇ ದಿಬನ 319 ಮಂದಿಗೆ ಕೋವಿಡ್ ಪಾಸಿಟಿವ್ ಆಗಿದೆ ಎಂಬುದು ಈ ವಿಚಾರದ ಗಾಂಭೀರ್ಯ ತಿಳಿಸುತ್ತದೆ. ಪ್ರತಿರೋಧ ಚಟುವಟಿಕೆಗಳು ಇನ್ನಷ್ಟು ಚುರುಕುಗೊಳ್ಳಬೇಕಾದುದೂ ಅನಿವಾರ್ಯವಾಗಿದೆ. ಸಂಪರ್ಕ ಮೂಲಕ 290 ಮಂದಿಗೆ ಕೋವಿಡ್ ಖಚಿತವಾಗಿದೆ. ನಗರ-ಗ್ರಾಮಗಳ ವ್ಯತ್ಯಾಸವಿಲ್ಲದೆ ಸೋಂಕು ವ್ಯಾಪಿಸುತ್ತಿದೆ. ಸುರಕ್ಷೆ ಮುಂಜಾಗರೂಕತೆ ಬಗ್ಗೆ ಅಸಡ್ಡೆ ತಳೆಯಲಾಗುತ್ತಿರುವುದೇ ಇದಕ್ಕೆ ಪ್ರಧಾನ ಕಾರಣ. ಸೆ.21ರ ನಂತರ ನಿಯಂತ್ರಣಗಳಲ್ಲಿ ಹೆಚ್ಚುವರಿ ಸಡಿಲಿಕೆ ಜಾರಿಗೆ ಬರಲಿದ್ದು, ಪ್ರತಿರೋಧ ಚಟುವಟಿಕೆಗಳೂ ಬಿಗಿಯಾಲಿವೆ. ಆರೋಗ್ಯ ಇಲಾಖೆ ತಿಳಿಸುವ ಎಲ್ಲ ಕಟ್ಟುನಿಟ್ಟುಗಳನ್ನು ಪಾಲಿಸಬೇಕು. ವಿಶೇಷವಾಗಿ 60 ವರ್ಷಕ್ಕಿಂತ ಮೇಲ್ಪಟ್ಟ ಹಿರಿಯರು ಮತ್ತು 10 ವರ್ಷಕ್ಕಿಂತ ಕೆಳಗಿನ ವಯೋಮಾನದ ಮಕ್ಕಳು ಈ ನಿಟ್ಟಿನಲ್ಲಿ ಹೆಚ್ಚುವರಿ ಜಾಗರೂಕತೆ ವಹಿಸಬೇಕು ಎಂದವರು ತಿಳಿಸಿರುವರು.