ಕುಂಬಳೆ: ದೇಶಕ್ಕೆ ಬಂದ ಮಹಾಮಾರಿ ಕೋವಿಡ್ ಕೊರೋನಾವನ್ನು ಕಾಸರಗೋಡು ಜಿಲ್ಲೆಯಲ್ಲಿ ಅತಿ ವ್ಯಾಪಕವಾಗಿ ಹರಡುವುದನ್ನು ತಾನೊಬ್ಬನೇ ನಿಯಂತ್ರಿಸುವುದೆಂದೇ ಬಿಂಬಿಸುತ್ತಿರುವ ಕಾಸರಗೋಡು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅವರು ಶುಕ್ರವಾರ ನಡೆದ ಕೇರಳ ತುಳು ಅಕಾಡೆಮಿಯ ತುಳು ಭವನ ಉದ್ಘಾಟನಾ ಸಮಾರಂಭದಲ್ಲಿ ಕೋವಿಡ್ ಮಾನದಂಡಗಳ ಉಲ್ಲಂಘನೆಯಾಗಿದೆ ಎಂದು ಬಿಜೆಪಿ ಕೇರಳ ರಾಜ್ಯ ಸಮಿತಿ ಸದಸ್ಯ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಆರೋಪಿಸಿದ್ದಾರೆ.
ವೇದಿಕೆಯಲ್ಲಿ ಉಸ್ತುವಾರಿ ಸಚಿವರು ದೀಪ ಬೆಳಗಿಸುವಾಗ ಎಲ್ಲಾ ಜವಾಬ್ದಾರಿಯುತ ಜನಪ್ರತಿನಿಧಿಗಳು, ಸಚಿವರು ತುಳು ಅಕಾಡೆಮಿಯ ಸದಸ್ಯರುಗಳು ಮಾಸ್ಕ್ ಧರಿಸದೇ, ಜನಪ್ರತಿನಿಧಿಗಳ ಮಧ್ಯೆ ಅಂತರಗಳನ್ನು ಕಾಯದೆ ಕೋವಿಡ್ ಕಾನೂನನ್ನು ಸಮರ್ಪಕವಾಗಿ ಪರಿಪಾಲನೆ ಮಾಡದೆ ಕಾನೂನನ್ನು ಉಲ್ಲಂಘಿಸಿರುವ ಕಾರಣ ಮಂಜೇಶ್ವರ ವೃತ್ತ ನಿರೀಕ್ಷಕರು ಜನಪ್ರತಿನಿಧಿಗಳು ಹಾಗೂ ವೇದಿಕೆಯಲ್ಲಿರುವ ಎಲ್ಲರ ವಿರುದ್ಧ ಕೇಸನ್ನು ದಾಖಲಿಸಿ ಕ್ರಮಕೈಗೊಳ್ಳಬೇಕೆಂದು ವಿ. ಬಾಲಕೃಷ್ಣ ಶೆಟ್ಟಿ ಆಗ್ರಹಿಸಿದ್ದಾರೆ.
ಸಚಿವರೂ ಸೇರಿ ಎಲ್ಲಾ ಗಣ್ಯರು ಚಪ್ಪಲಿ ಧರಿಸಿ ದೀಪ ಪ್ರಜ್ವಲನ ಮಾಡಿದ್ದು ತುಳು ಸಂಸ್ಕøತಿಯ ಮೇಲೆ ಮಾಡಿದ ಅವಮಾನವಾಗಿದೆ. ಈ ಬಗ್ಗೆ ಕಂದಾಯ ಸಚಿವ ಚಂದ್ರಶೇಖರ್ ನಾಯರ್ ಹಾಗೂ ವೇದಿಕೆಯಲ್ಲಿ ಭಾಗವಹಿಸಿದ ಜನಪ್ರತಿನಿಧಿಗಳು ಜಿಲ್ಲಾ ಅಧಿಕಾರಿ ಸಹಿತ ಭಾಗವಹಿಸಿದ ಎಲ್ಲ ಜನಪ್ರತಿನಿಧಿಗಳು ತುಳುನಾಡಿನ ಜನತೆಯಲ್ಲಿ ಕ್ಷಮಾಪಣೆ ಕೇಳಬೇಕು ಎಂದು ಆಗ್ರಹಿಸಿದ್ದಾರೆ.