ಬದಿಯಡ್ಕ: ಶ್ರೇಷ್ಟ ವಿದ್ವಾಂಸ, ಅದ್ವಿತೀಯ ಜ್ಯೋತಿಶಾಸ್ತ್ರ ಪಾರಂಗತ, ಪ್ರಶ್ನೆ ನಿರೂಪಣ ನಿಪುಣ, ಜೋತಿಷರತ್ನ ವೆಂಕಟರಮಣ ಭಟ್ ವಳಕುಂಜ ಅವರು ಮಿತ್ತೂರು ಸಂಪ್ರತಿಷ್ಠಾನದ ವಿದ್ವತ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಕಾಸರಗೋಡು ಬದಿಯಡ್ಕ ಸಮೀಪದ ವಳಕ್ಕುಂಜ ಕೃಷ್ಣ ಭಟ್ ಮತ್ತು ದೇವಕಿ ದಂಪತಿಗಳ ಪುತ್ರನಾಗಿ 1944 ಡಿಸೆಂಬರ್ 5 ರಂದು ಜನಿಸಿದ ವೆಂಕಟರಮಣ ಭಟ್ ತಮ್ಮ ಹಿರಿಯರಿಂದ ಬಳುವಳಿಯಾಗಿ ಪಡೆದ ಜ್ಯೋತಿಷ್ಯವನ್ನು ಆಳವಾಗಿ ಅಧ್ಯಯನ ನಡೆಸಿ ತಮ್ಮ 16ನೇ ವಯಸ್ಸಿನಲ್ಲಿ ಪ್ರಯೋಗಕ್ಕೆ ತೊಡಗಿ ಯಶಸ್ವಿಯಾಗಿದ್ದರು.ಕಾಕುಂಜೆ ವೆಂಕಟರಮಣ ಭಟ್ ಪಾಲಕ್ಕಾಡ್ ಅವರಿಂದ ಜ್ಯೋತಿಷ್ಯ ಶಾಸ್ತ್ರದಲ್ಲಿ ಹೆಚ್ಚಿನ ಪ್ರಾವಿಣ್ಯತೆ ಪಡೆದಿದ್ದರು.
ಮುನಿಯಂಗಳ ಮಹಾಲಿಂಗ ಭಟ್ ಅವರಿಂದ ಜ್ಯೋತಿಷ್ಯಶಾಸ್ತ್ರಕ್ಕೆ ಪೂರಕವಾದ ಶಿಲ್ಪ ಶಾಸ್ತ್ರವನ್ನು ಅಭ್ಯಸಿಸಿದ್ದರು.ಜ್ಯೋತಿಷ್ಯ ಶಾಸ್ತ್ರ, ಮನುಷ್ಯಾಲಯ ವಾಸ್ತುಗಳ ಮೂಲಕ ಕೇರಳ, ಕರ್ನಾಟಕ ಆಂದ್ರ ಸೇರಿದಂತೆ ಇತಿಹಾಸ ಪ್ರಸಿದ್ಧ ದೇವಾಲಯ, ದೈವಾಲಯಗಳ ಅಧ್ಯಯನ ನಡೆಸಿ ಲಕ್ಷಾಂತರ ಜನರ ದುಃಖ ದುಮ್ಮಾನಗಳನ್ನು ನಿವಾರಿಸಿದ್ದಾರೆ.ತಮ್ಮ ನೇರ, ದಿಟ್ಟ, ಪ್ರಖರ ವಾಕ್ ಚಾತುರ್ಯದ ಮೂಲಕ ಶಾಸ್ತ್ರದ ತಿರುಳನ್ನು ತಿಳಿಸಿ, ದೈವಜ್ಞ ಚಿಂತನೆ ಮೂಲಕ ಪ್ರಶ್ನೆಗಳಿಗೆ ಉತ್ತರ ಹುಡುಕುತ್ತಾ ಸಮಸ್ಯೆಯ ಮೂಲವನ್ನು ಸಂಶೋಧಿಸಿ ಶಿಷ್ಯ ಕೋಟಿಯ ಕಷ್ಟಗಳನ್ನು ನಿವಾರಿಸಿದ್ದಾರೆ. ಪತ್ನಿ ಶುಭಾವತಿ, ಇಬ್ಬರು ಪುತ್ರರು, ಪುತ್ರಿ ಸಹಿತ ತುಂಬು ಸಂಸಾರವಂತರರಾದ ವೆಂಕಟರಮಣ ಭಟ್ ಅವರು ತಮ್ಮ ಪುತ್ರರಾದ ಮುರಳೀಕೃಷ್ಣ ಶರ್ಮ ಮತ್ತು ಗಿರೀಶ್ ಶರ್ಮ ಅವರಿಗೆ ಜ್ಯೋತಿಷ್ಯ ಶಾಸ್ತ್ರವನ್ನೇ ಧಾರೆ ಎರೆದು ವೃತ್ತಿಯನ್ನಾಗಿಸಿದ್ದಾರೆ. ತಮ್ಮ ಶಕ್ತಿಯನ್ನು ಧಾರೆ ಎರೆಯುವ ಮೂಲಕ ಸುಮಾರು 50ಕ್ಕೂ ಮೀರಿದ ಶಿಷ್ಯರಿಗೆ ನೇರ ಅಧ್ಯಯನ, ಗುರುಗಳಾಗಿ ಸೇವೆ ನೀಡಿದ್ದಾರೆ.
ಶ್ರೀ ರಾಮಚಂದ್ರಾಪುರ ಮಠದ ಮೂಲಸ್ಥಾನ ಶ್ರೀಕ್ಷೇತ್ರ ಗೋಕರ್ಣ ಅಶೋಕೆಯಲ್ಲಿ 2017 ಜೂನ್ 19ರಿಂದ ಜೂ 29ರ ವರೆಗೆ ನೆರವೇರಿದ ಮೂಲಮಠ ಪುನರುತ್ಥಾನದ ಮಹಾ ಸಂಕಲ್ಪ ಸಿದ್ಧಿಗಾಗಿ ಮೌಹೂರ್ತಿಕರಾಗಿ ಸೇವೆ ಸಲ್ಕಿಸಿ ತ್ಯಾಗ, ಸಮರ್ಪಣಾ ಪರಾಕಾಷ್ಟೆ ಮೆರೆದಿದ್ದರು.ವಿಟ್ಲ ಶ್ರೀ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ 2007 ಜೂನ್ 1ರಿಂದ ಜೂನ್ 4ರ ತನಕ ಜರುಗಿದ ಪುನರ್ ಪ್ರತಿಷ್ಠೆ, ಬ್ರಹ್ಮಕಲಶ ಕಾರ್ಯದಲ್ಲಿ ಶ್ರೀ ಕ್ಷೇತ್ರದ ಜಟಿಲ ಪ್ರಶ್ನೆಗಳನ್ನು ಲೀಲಾಜಾಲವಾಗಿ ಬೇಧಿಸಿ ಸುಲಭ ಪರಿಹಾರಗಳನ್ನು ಸೂಚಿಸಿದ್ದರು.ಪುಂಡೂರು ದಾಮೋದರ ಪುಣಿಂಚತ್ತಾಯ ಪ್ರತಿಷ್ಠಾನ ನೀರ್ಮಜೆ ಪುಂಡೂರು ಇವರಿಂದ 2015 ನವಂಬರ್ 24ರಲ್ಲಿ ಸನ್ಮಾನ, ಹೊನ್ನಾವರ ಶ್ರೀ ಸಂಸ್ಥಾನ ಹಳದೀಪುರ ಶಾಂತಾಶ್ರಮ ಮಠದ ಅಭಿನಂದನೆ, 2020 ಜನವರಿ 8 ರಂದು ಸಾರಡ್ಕ ಆರಾಧನಾ ಕಲಾಭವನ ಲೋಕಾರ್ಪಣಾ ಸಮಾರಂಭದಲ್ಲಿ ಆರಾಧನಾ ಗೌರವಾರ್ಪಣೆ ಹಲವು ಪ್ರಶಸ್ತಿ ಪುರಸ್ಕಾರಗಳನ್ನು ಪಡೆದಿದ್ದಾರೆ.
ಹಿರಿಯ ಜೋತಿಷಿ ವೆಂಕಟರಮಣ ಭಟ್ ಅವರು ಜೀವನ, ಪರಿಸರ, ದೈವ ದೇವರುಗಳ ಚಿಂತನೆ, ನವಗ್ರಹ ಚಿಂತನೆ, ಪರಿಹಾರ ಕಾರ್ಯವನ್ನೂ ತಿಳಿಸುವುದಲ್ಲದೆ ಮಕ್ಕಳನ್ನು ದೈವೀಕಾರ್ಯದಲ್ಲಿ ತೊಡಗಿಸುವಂತೆ ಪ್ರೇರಣೆ ನೀಡಿದ್ದಾರೆ.ಜ್ಯೋತಿಷ್ಯ ಪಾಠವನ್ನು ನಡೆಸುವ ಮೂಲಕ ಶಾಸ್ತ್ರಾಧ್ಯಾಯನ ಪರಂಪರೆಯನ್ನು ಮುಂದಿನ ಪೀಳಿಗೆಗೂ ಹಸ್ತಾಂತರಿಸಿದ್ದಾರೆ.