ನವದೆಹಲಿ: ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯ ಬಳಿ ಭಾರತೀಯ ಸೇನೆಯ ಗಸ್ತು ಮತ್ತು ನಿಲುಗಡೆಯನ್ನು ತಡೆಯಲು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿ(ಪಿಎಲ್ಎ)ಸಾಕಷ್ಟು ಪ್ರಯತ್ನಿಸುತ್ತಿದೆ. ಆದರೆ ಜಗತ್ತಿನಲ್ಲಿರುವ ಯಾವುದೇ ಶಕ್ತಿಯು ಭಾರತೀಯ ಸೈನಿಕರನ್ನು ತಡೆಯಲು ಸಾಧ್ಯವಿಲ್ಲ, ನಮ್ಮ ಸೈನಿಕರ ನಿಲುಗಡೆಯಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಗುರುವಾರ ರಾಜ್ಯಸಭೆಯಲ್ಲಿ ಹೇಳಿದ್ದಾರೆ.
ಪೂರ್ವ ಲಡಾಕ್ ನ ಗಡಿ ವಾಸ್ತವ ರೇಖೆಯಲ್ಲಿ ಮುಂದುವರಿದಿರುವ ಭಾರತ-ಚೀನಾ ಸೇನೆ ನಿಲುಗಡೆ ಸಂಬಂಧ ಇಂದು ರಾಜ್ಯಸಭೆಯಲ್ಲಿ ಹೇಳಿಕೆ ನೀಡಿದ ಅವರು, ಭಾರತೀಯ ಸೇನೆಯ ಸಾಂಪ್ರದಾಯಿಕ ಮತ್ತು ಗಸ್ತು ಮಾದರಿಯಲ್ಲಿ ಯಾವುದೇ ಬದಲಾವಣೆ ಮಾಡುವುದಿಲ್ಲ ಎಂದರು.
ರಾಜ್ಯಸಭೆಯಲ್ಲಿ ಇಂದು ಮಾಜಿ ರಕ್ಷಣಾ ಸಚಿವ ಎ ಕೆ ಆಂಟನಿ ಅವರು ಈ ಹಿಂದೆ ಗಸ್ತು ತಿರುಗುತ್ತಿದ್ದ ಪ್ರದೇಶಕ್ಕೆ ಇನ್ನು ಮುಂದೆ ಭಾರತೀಯ ಸೈನಿಕರನ್ನು ಪ್ರವೇಶಿಸಲು ಬಿಡುವುದಿಲ್ಲವೇ ಎಂದು ಕೇಳಿದ್ದಕ್ಕೆ, ಭಾರತ-ಚೀನಾ ಗಡಿ ಸಂಘರ್ಷ ನಡೆಯುತ್ತಿರುವುದು ಇಲ್ಲಿಯೇ ಮತ್ತು ಇದೇ ಕಾರಣಕ್ಕೆ. ಹೀಗಾಗಿ ಸಾಂಪ್ರದಾಯಿಕ ಮಾದರಿಯಲ್ಲಿಯೇ ಗಸ್ತು ನಡೆಸಲಾಗುತ್ತದೆ. ನಮ್ಮ ಸೈನಿಕರ ಚಲನವಲನಗಳನ್ನು ತಡೆಯಲು ಜಗತ್ತಿನ ಯಾವ ಶಕ್ತಿಯಿಂದಲೂ ಸಾಧ್ಯವಿಲ್ಲ ಎಂಬುದನ್ನು ಇಲ್ಲಿ ಸ್ಪಷ್ಟವಾಗಿ ಹೇಳುತ್ತೇವೆ ಎಂದು ರಾಜನಾಥ್ ಸಿಂಗ್ ಹೇಳಿದರು.
ಈ ವಿಚಾರ ತುಂಬಾ ಸೂಕ್ಷ್ಮವಾಗಿರುವುದರಿಂದ ಅದನ್ನು ಗಮನದಲ್ಲಿಟ್ಟುಕೊಂಡು ಹೆಚ್ಚಿನ ವಿವರವನ್ನು ಈ ಸಂದರ್ಭದಲ್ಲಿ ನೀಡಲು ಸಾಧ್ಯವಿಲ್ಲ ಎಂದು ಕೂಡ ರಾಜನಾಥ್ ಸಿಂಗ್ ತಿಳಿಸಿದರು.
ಇದಕ್ಕೆ ರಾಜ್ಯಸಭೆಯಲ್ಲಿ ಸದಸ್ಯರು ಸಹಮತಿ ಸೂಚಿಸಿದರು. ಭಾರತೀಯ ಸೇನೆಗೆ ಪಕ್ಷಭೇದ ಮರೆತು ಬೆಂಬಲ ಸೂಚಿಸಿದ ಸದಸ್ಯರು ದೇಶಕ್ಕಾಗಿ ಸೈನಿಕರ ಪರವಾಗಿ ನಿಲ್ಲುತ್ತೇವೆ ಎಂದರು.
ರಾಜ್ಯಸಭಾ ಸಭಾಪತಿ ಎಂ ವೆಂಕಯ್ಯ ನಾಯ್ಡು, ಎಲ್ಲಾ ಪಕ್ಷಗಳ ಸದಸ್ಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕಾರ್ಯತಂತ್ರವನ್ನು ಸರ್ಕಾರ ಸೃಷ್ಟಿಸಬೇಕು ಮತ್ತು ಎಲ್ಲರಿಗೂ ಗಡಿಯಲ್ಲಿ ಏನು ನಡೆಯುತ್ತಿದೆ ಎಂಬುದು ಕಾಲಕಾಲಕ್ಕೆ ಗೊತ್ತಾಗಬೇಕು ಎಂದರು.
ದ್ರೋಹದ ಬುದ್ದಿ ಹೊಂದಿರುವ ಚೀನಾದ ಜೊತೆ ಜಾಗರೂಕತೆಯಿಂದ ವ್ಯವಹರಿಸಬೇಕೆಂದು ಹಲವು ಸದಸ್ಯರು ಅಭಿಪ್ರಾಯಪಟ್ಟರು.
ಭಾರತ, ಈಗಿನ ಗಡಿ ಸಮಸ್ಯೆಯನ್ನು ಮಾತುಕತೆ ಮತ್ತು ಶಾಂತಿ ಸಮಾಲೋಚನೆ ಮೂಲಕ ಬಗೆಹರಿಸಲು ಬದ್ಧವಾಗಿರುವುದಾಗಿ ರಾಜನಾಥ್ ಸಿಂಗ್ ಈ ಸಂದರ್ಭದಲ್ಲಿ ತಿಳಿಸಿದರು.