ತಿರುವನಂತಪುರ: ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳ ಅಪರಾಧ ಹಿನ್ನೆಲೆ ಬಗ್ಗೆ ಸಾರ್ವಜನಿಕರಿಗೆ ತಿಳಿಸಲು ಚುನಾವಣಾ ಆಯೋಗ ಪರಿಷ್ಕøತ ಮಾರ್ಗಸೂಚಿ ಹೊರಡಿಸಿದೆ. ಅಪರಾಧದ ಹಿನ್ನೆಲೆಯನ್ನು ಮಾಧ್ಯಮಗಳ ಮೂಲಕ ಪ್ರಕಟಿಸುವ ಬಗ್ಗೆ ಹೊಸ ಪ್ರಸ್ತಾಪ ಮುಂದಿಡಲಾಗಿದೆ.
ಚುನಾವಣಾ ಆಯೋಗದ ನಿರ್ದೇಶನದಂತೆ ಅಭ್ಯರ್ಥಿಗಳು ಮತ್ತು ರಾಜಕೀಯ ಪಕ್ಷಗಳು ತಮ್ಮ ಅಪರಾಧ ದಾಖಲೆಯ ವಿವರಗಳನ್ನು ಮೂರು ಬಾರಿ ಮಾಧ್ಯಮಗಳಲ್ಲಿ ಪ್ರಕಟಿಸಬೇಕಾಗುತ್ತದೆ. ನಾಮಪತ್ರ ಸಲ್ಲಿಸಿದ ದಿನಗಳು ಮತ್ತು ಚುನಾವಣೆಯ ಅಂತ್ಯದ ನಡುವೆ ಇದನ್ನು ಪ್ರಕಟಿಸಬೇಕು.
ಮೊದಲ ಪ್ರಕಟಣೆಯನ್ನು ನಾಮಪತ್ರಗಳನ್ನು ಹಿಂಪಡೆಯಲು ಕೊನೆಯ ದಿನದ ಮೊದಲು ಮೊದಲ ನಾಲ್ಕು ದಿನಗಳಲ್ಲಿ ಮತ್ತು ಎರಡನೇ ಪ್ರಕಟಣೆಯನ್ನು ಐದರಿಂದ ಎಂಟು ದಿನಗಳಲ್ಲಿ ಮಾಡಬೇಕು. ಪ್ರಚಾರದ ಅಂತ್ಯಕ್ಕೆ ಒಂಬತ್ತು ದಿನಗಳ ಮೊದಲು ಮತ್ತು ಮತದಾನಕ್ಕೆ ಎರಡು ದಿನಗಳ ಮೊದಲು ಅಂತಿಮ ಪ್ರಕಟಣೆ ನೀಡಲು ಸೂಚಿಸಲಾಗುವುದು.
ಅವಿರೋಧ ಆಯ್ಕೆಯಾಗುವ ಅಭ್ಯರ್ಥಿಗಳು ಮತ್ತು ಅವರನ್ನು ನಾಮನಿರ್ದೇಶನ ಮಾಡುವ ರಾಜಕೀಯ ಪಕ್ಷಗಳು ಅಭ್ಯರ್ಥಿಯ ಅಪರಾಧ ಹಿನ್ನೆಲೆಯ ಬಗ್ಗೆ ಮಾಹಿತಿಯನ್ನು ಪ್ರಕಟಿಸುವಂತೆ ಚುನಾವಣಾ ಆಯೋಗವು ನಿರ್ದೇಶಿಸಿದೆ.
ಏತನ್ಮಧ್ಯೆ ಕೋವಿಡ್ ಸೋಂಕು ವ್ಯಾಪಕಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯಾಡಳಿತಗಳ ಚುನಾವಣೆಯ ಸಮಯವನ್ನು ಒಂದು ಗಂಟೆ ವಿಸ್ತರಿಸಲು ಕೇರಳ ಪುರಸಭೆ ಕಾಯ್ದೆ ಮತ್ತು ಕೇರಳ ಪಂಚಾಯತ್ ರಾಜ್ ಕಾಯ್ದೆಗೆ ತಿದ್ದುಪಡಿ ತರಲು ಸುಗ್ರೀವಾಜ್ಞೆ ಹೊರಡಿಸಲು ರಾಜ್ಯಪಾಲರಿಗೆ ಶಿಫಾರಸು ಮಾಡಲು ಬುಧವಾರ ರಾಜ್ಯ ಸಚಿವ ಸಂಪುಟ ನಿರ್ಧರಿಸಿದೆ. ತಿದ್ದುಪಡಿಯ ಪ್ರಕಾರ ಮತದಾನದ ಸಮಯ ಬೆಳಿಗ್ಗೆ 7 ರಿಂದ ಸಂಜೆ 6 ರವರೆಗೆ ಇರಲಿದೆ. ಕೋವಿಡ್ ಸೋಂಕಿಗೊಳಗಾದವರು ಮತ್ತು ಸಂಪರ್ಕತಡೆಯಲ್ಲಿ(ಕ್ವಾರಂಟೈನ್ ) ವಾಸಿಸುವವರಿಗೆ ಅಂಚೆ ಮೂಲಕ ಮತ ಚಲಾಯಿಸಲು ಅವಕಾಶವಿರಲಿದೆ.