ಕಾಸರಗೋಡು: ಬಿಜೆಪಿ ನಡೆಸಿದ ಪ್ರತಿಭಟನೆಯ ಕಾವು ಕೊನೆಗೂ ಜಿಲ್ಲಾಡಳಿತದ ಕಣ್ತೆರೆಸುವ ಸೂಚನೆ ಲಭ್ಯವಾಗಿದ್ದು ಮಂಗಳವಾರ ಮತ್ತು ಬುಧವಾರ ತಲಪ್ಪಾಡಿ ಗಡಿಯ ಮೂಲಕ ಮಂಗಳೂರಿಗೆ ತೆರಳಲು ಇದ್ದ ನಿರ್ಬಂಧವನ್ನು ಹಿಂಪಡೆದಿದೆ. ಜೊತೆಗೆ ಯಾವುದೇ ಪರಿಶೋಧನೆಗಳಾಗಲಿ, ಆಂಟಿಜನ್ ಟೆಸ್ಟ್, ಪೋಲೀಸರ ಕಿರುಕುಳ ಇರಲಾರದೆಂದು ತಿಳಿಸಿದೆ. ಬುಧವಾರ ಕೋವಿಡ್ ಹಿನ್ನೆಲೆಯ ಜಿಲ್ಲಾ ಕೋರ್ ಸಮಿತಿಯ ಸಭೆ ನಡೆಯಲಿದ್ದು ಆ ಬಳಿಕ ಮುಂದಿನ ನಿರ್ಣಯ ಕೈಗೊಳ್ಳಲಾಗುವುದೆಂಬ ಭರವಸೆಯನ್ನು ಜಿಲ್ಲಾಡಳಿತ ನೀಡಿದ್ದು ಬಿಜೆಪಿಯ ಪ್ರತಿಭಟನಾ ಸರಣಿಗೆ ಕೊನೆಗೂ ಜಿಲ್ಲಾಡಳಿತ ಎಚ್ಚೆತ್ತಿರುವುದು ಭರವಸೆಗೆ ಕಾರಣವಾಗಿದೆ. ಜೊತೆಗೆ ಕಾಸರಗೋಡಿನಿಂದ ಮಂಜೇಶ್ವರ ತನಕ ಮಾತ್ರ ಸಂಚರಿಸುತ್ತಿದ್ದ ಕೇರಳ ಸಾರಿಗೆ ಬಸ್ ಸಂಚಾರವನ್ನು ತಲಪ್ಪಾಡಿ ಗಡಿಯ ವರೆಗೆ ವಿಸ್ತರಿಸಲು ಜಿಲ್ಲಾಡಳಿತ ಒಪ್ಪಿಗೆ ಸೂಚಿಸಿರುವುದಾಗಿ ತಿಳಿದುಬಂದಿದೆ.