ಪಾಟ್ನಾ: ಬಿಹಾರದ ಬಹು ನಿರೀಕ್ಷಿತ ಕೋಸಿ ರೈಲು ಮಹಾ ಸೇತುವೆಯನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಲೋಕಾರ್ಪಣೆ ಮಾಡಿದ್ದಾರೆ.
ವಿಡಿಯೊ ಕಾನ್ಫರೆನ್ಸ್ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು, ಐತಿಹಾಸಿಕ ಕೋಸಿ ರೈಲು ಮಹಾ ಸೇತುವೆಯನ್ನು ಲೋಕಾರ್ಪಣೆ ಮಾಡಿದ್ದು, ಇದರ ಜತೆಗೆ ಬಿಹಾರದಲ್ಲಿ ನೂತನ ರೈಲು ಮಾರ್ಗ ಯೋಜನೆ, ವಿದ್ಯುದ್ದೀಕರಣ ಯೋಜನೆಗಳಿಗೂ ಪ್ರಧಾನಿ ಶುಕ್ರವಾರ ಚಾಲನೆ ನೀಡಿದರು. ಈ ಸೇತುವೆಯು 1.0 ಕಿಮೀ ಉದ್ದವಿದ್ದು 516 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ,. 2003-04ರಲ್ಲಿ ಈ ಸೇತುವೆ ನಿರ್ಮಾಣ ಯೋಜನೆಗೆ ಚಾಲನೆ ನೀಡಲಾಗಿತ್ತು ಎಂದು ಸರ್ಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಈ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ, ಈ ಯೋಜನೆಗಳು ಬಿಹಾರದಲ್ಲಿನ ರೈಲ್ವೆ ಸಂಪರ್ಕ ವ್ಯವಸ್ಥೆಯನ್ನು ಅಭಿವೃದ್ಧಿ ಪಡಿಸುವುದರ ಜತೆಗೆ ಪಶ್ಚಿಮ ಬಂಗಾಳ ಮತ್ತು ಪಶ್ಚಿಮ ಭಾರತಕ್ಕೆ ಸಂಪರ್ಕವೇರ್ಪಡುವಂತೆ ಮಾಡುತ್ತದೆ. ಅಟಲ್ ಬಿಹಾರಿ ವಾಜಪೇಯಿ ಅವರು ಅಧಿಕಾರದಲ್ಲಿದ್ದಾಗ 2004ರಲ್ಲಿ ಕೋಸಿ ರೈಲು ಮಹಾ ಸೇತುವೆಗೆ ಶಂಕು ಸ್ಥಾಪನೆ ಮಾಡಲಾಗಿತ್ತು. 2004ರ ನಂತರದ ಸರ್ಕಾರ ಮಾಡಿದ ರೀತಿಯಲ್ಲಿಯೇ ಈ ಕೆಲಸ ಮಾಡಿದ್ದರೆ ಈ ಯೋಜನೆ ನಿಗದಿತ ಕಾಲದಲ್ಲಿ ಪೂರ್ಣಗೊಳ್ಳುತ್ತಿರಲಿಲ್ಲ. ಕಳೆದ 6 ವರ್ಷಗಳಲ್ಲಿ ನವ ಭಾರತದ ಕನಸು ಮತ್ತು ಆತ್ಮನಿರ್ಭರ್ ಭಾರತದ ನಿರೀಕ್ಷೆಯಲ್ಲಿ ಭಾರತೀಯ ರೈಲ್ವೆ ಇಲಾಖೆಯ ಅಭಿವೃದ್ಧಿ ಕಾರ್ಯಗಳು ನಡೆದಿವೆ. ಮೇಡ್ ಇನ್ ಇಂಡಿಯಾ ರೈಲುಗಳು ರೈಲು ಸಂಪರ್ಕ ವ್ಯವಸ್ಥೆಯ ಭಾಗವಾಗಿವೆ ಎಂದು ಹೇಳಿದ್ದಾರೆ.
ಬಳಿಕ ಮಾತನಾಡಿದ ರೈಲ್ವೆ ಸಚಿವ ಪೀಯುಷ್ ಗೋಯಲ್ ಅವರು, 'ಕೋಸಿ ರೈಲು ಮಹಾ ಸೇತುವೆಯು ಕೇವಲ ಎರಡು ಸ್ಥಳಗಳ ನಡುವೆ ಸಂಪರ್ಕ ಕಲ್ಪಿಸುವುದಲ್ಲದೆ ಬಿಹಾರದ ಆರ್ಥಿಕ ಬೆಳವಣಿಗೆಗೂ ಸಹಾಯ ಮಾಡಲಿದೆ. ಇದು ರಾಜ್ಯದ ಸಮಗ್ರ ಅಭಿವೃದ್ಧಿಗೆ ಕಾರಣವಾಗಲಿದೆ ಎಂದು ಹೇಳಿದ್ದಾರೆ.
ಇನ್ನು ಬಿಹಾರದ ಅಭಿವೃದ್ಧಿಗಾಗಿ ಕಾರ್ಯವೆಸಗಿದ ರೈಲ್ವೆ ಸಚಿವ ಮತ್ತು ಪ್ರಧಾನಿಯವರಿಗೆ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಧನ್ಯವಾದಗಳನ್ನರ್ಪಿಸಿದ್ದು, ಈ ರೈಲು ಮಾರ್ಗವು ಜೈನ ಮತ್ತು ಬೌದ್ಧ ಪುಣ್ಯ ಕ್ಷೇತ್ರಗಳಿಗೆ ಸಂಪರ್ಕ ಕಲ್ಪಿಸುವುದರೊಂದಿಗೆ ಬಿಹಾರದಲ್ಲಿ ಪ್ರವಾಸೋದ್ಯೋಮಕ್ಕೆ ಉತ್ತೇಜನ ನೀಡಲಿದೆ ಎಂದು ಬಿಹಾರದ ಉಪ ಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಹೇಳಿದ್ದಾರೆ.