ಕಾಸರಗೋಡು: ಮಾಸ್ಟರ್ ಯೋಜನೆಗೆ ರೇಡಿಯೋ ಮೂಲಕ ಹೊಸ ಸಂಚಲನ ಮೂಡಿಸುವ ಮೂಲಕ ಬೇಡಡ್ಕ ಗ್ರಾಮ ಪಂಚಾಯತ್ ವಿನೂತನ ಕಾರ್ಯಕ್ರಮ ಹಮ್ಮಿಕೊಂಡಿದೆ.
ಕೋವಿಡ್ ಪ್ರತಿರೋಧ ಚಟುವಟಿಕೆಗಳನನು ಚುರುಕುಗೊಳಿಸುವ ನಿಟ್ಟಿನಲ್ಲಿ ಕಾಸರಗೋಡು ಜಿಲ್ಲೆಯ ವಿನೂತನ ಕಾರ್ಯಕ್ರಮವೇ ಮಾಸ್ಟರ್ ಯೋಜನೆ. ಇದು ಇಂದು ಇಡೀ ರಾಜ್ಯದಲ್ಲಿ ವ್ಯಾಪಿಸಿಕೊಂಡಿದೆ. ವಾರ್ಡ್ ಮಟ್ಟದ ಜನಜಾಗೃತಿ ಸಮಿತಿಗಳ ಚಟುವಟಿಕೆಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಶಿಕ್ಷಕರ ಸಹಾಯ ಒದಗಿಸುವ ಯೋಜನೆ ಇದಾಗಿದೆ. ಈ ಯೋಜನೆಗೆ ಹೆಚ್ಚುವರಿ ಉತ್ತೇಜನ ನೀಡುವ ಮತ್ತು ಜನಜಾಗೃತಿ ವಿಚಾರಗಳನ್ನು ಜನರ ಬಳಿಗೆ ತಲಪಿಸುವ ನಿಟ್ಟಿನಲ್ಲಿ ಬೇಡಡ್ಕ ಪಂಚಾಯತ್ ಜನಜಾಗೃತಿ ಸಮಿತಿ ಮತ್ತು ಮಾಸ್ಟರ್ ಯೋಜನೆಯ ಜಂಟಿ ಆಶ್ರಯದಲ್ಲಿ ರೇಡಿಯೋ ಕಾರ್ಯಕ್ರಮ ನಡೆಸುತ್ತಿದೆ. ಈ ಮೂಲಕ ಪ್ರತಿರೋಧ ಚಟುವಟಿಕೆಗಳಿಗೆ ಶಿಕ್ಷಕರ ಸಹಕಾರ ಪಡೆಯುವಿಕೆಗೆ ವಿನೂತನ ಮುಖವೊಂದು ಇಲ್ಲಿ ಲಭಿಸಿದೆ.
ಆಕಾಶವಾಣಿ ವಾರ್ತಾ ಬುಲೆಟಿನ್ ಗೆ ಸಮಾನವಾಗಿ ಪ್ರತಿ ದಿನ ರಾತ್ರಿ 9 ಗಂಟೆಗೆ ಮಾಸ್ಟರ್ ರೇಡಿಯೋದಲ್ಲಿ ವಾರ್ತೆಗಳು ಪ್ರಸಾರಗೊಳ್ಳುತ್ತಿವೆ. ಪ್ರತಿ ವಾರ್ಡ್ ಮಟ್ಟದ ಹೊಣೆಹೊತ್ತಿರುವ ಶಿಕ್ಷಕರು ನೀಡುವ ಮಾಹಿತಿಗಳನ್ನು ಸುದ್ದಿ ರೂಪದಲ್ಲಿ ಪಂಚಾಯತ್ ಮಟ್ಟದ ಸಾಂಸ್ಕøತಿಕ ಕಾರ್ಯಕರ್ತರು, ವಿದ್ಯಾರ್ಥಿ ಪೆÇಲೀಸ್ ಕೆಡೆಟ್ ಗಳು, ಶಾಲಾ ವಿದ್ಯಾರ್ಥಿಗಳು ವಾರ್ತಾ ವಾಚನ ನಡೆಸುವರು. ತಾಂತ್ರಿಕ ವಿಭಾಗದ ಕಾರ್ಯಕರ್ತರು ಮೊದಲೇ ಸಿದ್ಧಪಡಿಸಿದ ಹಿನ್ನೆಲೆ ಸಂಗೀತದ ಜೊತೆಗೆ ವಾರ್ತೆಗಳನ್ನು ಸೇರಿಸಿ ವಾಟ್ಸ್ ಆಪ್ ಗ್ರೂಪ್ ಗಳಿಗೆ ನೀಡಲಾಗುವುದು. ಗ್ರಾಮಪಂಚಾಯತ್ ಅಧ್ಯಕ್ಷ, ಮಾಸ್ಟರ್ ಯೋಜನೆಯಲ್ಲಿ ಸಕ್ರಿಯರಾಗಿರುವ ಶಿಕ್ಷಕರು, ಸಿ.ಐ., ವೈದ್ಯಾಧಿಕಾರಿ ಮೊದಲಾದವರು ಇರುವ ಈ ಗ್ರೂಪ್ ಗಳಿಂದ ವಿವಿಧ ಸಂಘ-ಸಂಸ್ಥೆಗಳ ಕಾರ್ಯಕರ್ತರ ವಾಟ್ಸ್ ಆಪ್ ಗ್ರೂಪ್ ಗಳಿಗೆ, ಅವರ ಮೂಲಕ ಸಾರ್ವಜನಿಕರಿಗೆ ಈ ವಾರ್ತೆಗಳು ತಲಪುತ್ತವೆ.
ಗ್ರಾಮ ಪಂಚಾಯತ್ ನ 17 ವಾರ್ಡ್ ಗಳ ಜನಜಾಗ್ರತಿ ಸಮಿತಿಗಳು ಮತ್ತು ಪ್ರತಿ ವಾರ್ಡ್ ಮಟ್ಟದಲಲಿ ಚಟುವಟಿಕೆ ನಡೆಸುವ ಶಿಕ್ಷಕರು ಮಾಹಿತಿಗಳನ್ನು ನೀಡುತ್ತಿದ್ದಾರೆ. ಮಾಸ್ಕ್ ಧರಿಸದೇ ಇದ್ದವರ ವಿರುದ್ಧ ದಾಖಲಿಸಿದ ಕೇಸು, ಪಂಚಾಯತ್ ವ್ಯಾಪ್ತಿಯಲ್ಲಿ ತಲೆದೋರಿರುವ ಸೋಂಕು ಬಾಧೆಯ ಗಣನೆ, ಕೈಗೊಳ್ಳಬೇಕಾದ ಜಾಗರೂಕತೆ ಇತ್ಯಾದಿಗಳ ಮಾಹಿತಿಯನ್ನು ಮಾಸ್ಟರ್ ರೇಡಿಯೋ ನೀಡುತ್ತದೆ.
ಈ ಯೋಜನೆ ಜಿಲ್ಲೆಯ ಇತರ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಮಾದರಿ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು. ಕಳೆದ 5 ದಿನಗಳಿಂದ ಈ ರೇಡಿಯೋ ಚಟುವಟಿಕೆ ನಡೆಸುತ್ತಿದ್ದು, ಈಗಾಗಲೇ ಜನಮನ್ನಣೆ ಸಾಧಿಸಿದೆ. ಯಾವುದಾದರೂ ಒಂದು ದಿನ ವಾರ್ತೆ ಪ್ರಸಾರಕ್ಕೆ 5 ನಿಮಿಷ ತಡವಾದರೂ, ಜನ ಏನಾಯಿತು ಎಂದು ಕರೆಮಾಡುತ್ತಿದ್ದಾರೆ ಎಂದು ಬೇಡಡ್ಕ ಗ್ರಾಮ ಪಂಚಾಯತ್ ಅಧ್ಯಕ್ಷ ನ್ಯಾಯವಾದಿ ಸಿ.ರಾಮಚಂದ್ರನ್ ತಿಳಿಸಿರುವರು.