ಕಾಸರಗೋಡು: ಟಾಟಾ ಸಂಸ್ಥೆ ಸುಮಾರು 60ಕೋಟಿ ರೂ. ವೆಚ್ಚದಲ್ಲಿ ಕಾಸರಗೋಡಿನಲ್ಲಿ ನಿರ್ಮಿಸಿರುವ ಕೋವಿಡ್ ಆಸ್ಪತ್ರೆ ಉದ್ಘಾಟನೆಗೊಂಡರೂ, ತೆರೆದು ಕಾರ್ಯಾಚರಿಸದಿರುವುದು ಕೇರಳ ಸರ್ಕಾರದ ವೈಫಲ್ಯವಾಗಿರುವುದಾಗಿ ಬಿಜೆಪಿ ಜಿಲ್ಲಾಧ್ಯಕ್ಷ ಕೆ.ಶ್ರೀಕಾಂತ್ ತಿಳಿಸಿದ್ದಾರೆ. ಅವರು ಆಸ್ಪತ್ರೆ ಕಾರ್ಯಾಚರಿಸುವಂತೆ ಮಾಡುವಲ್ಲಿ ಕೇರಳ ಸರ್ಕಾರ ತೋರುವ ನಿರ್ಲಕ್ಷ್ಯ ಧೋರಣೆ ಖಂಡಿಸಿ ಬಿಜೆಪಿ ಉದುಮ ಮಂಡಲ ಸಮಿತಿ ವತಿಯಿಂದ ಆಸ್ಪತ್ರೆ ವಠಾರದಲ್ಲಿ ನಡೆದ ಪ್ರತಿಭಟನಾ ಧರಣಿ ಉದ್ಘಾಟಿಸಿ ಮಾತನಾಡಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ಕೆ.ಟಿ ಪುರುಷೋತ್ತಮನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಮಿತಿ ಕಾರ್ಯದರ್ಶಿ ಎ.ವೇಲಾಯುಧನ್, ಉಪಾಧ್ಯಕ್ಷ, ವಕೀಲ ಎ.ಸದಾನಂದ ರೈ, ಧನಂಜಯ ಮಧೂರು, ಮನುಲಾಲ್ ಮೇಲತ್, ಎನ್. ಬಾಬುರಾಜ್, ಜಯಕುಮಾರ್ ಮಾನಡ್ಕ, ರಾಧಾಕೃಷ್ಣ ನಂಬ್ಯಾರ್ ಮುಂತಾದವರು ಉಪಸ್ಥಿತರಿದ್ದರು.