ಕುಂಬಳೆ : ಕುಂಬಳೆ ಗ್ರಾಮ ಪಂಚಾಯತಿನ 10 ನೇ ವಾರ್ಡು ಇಚ್ಲಂಪಾಡಿ ಕೊಡ್ಯಮೆ ಇರ್ನಿರಾಯರ ಮನೆತನದ ಹಡಿಲುಬಿದ್ದ/ಪಾಳುಬಿದ್ದ ಸುಮಾರು 17 ಎಕರೆ ಗದ್ದೆಯಲ್ಲಿ ಪ್ರಸ್ತುತ ವಾರ್ಡು ಸದಸ್ಯ ಹರೀಶ ಗಟ್ಟಿ ಯವರ ನೇತೃತ್ವದಲ್ಲಿ ಊರಿರ ಕೃಷಿ ಉತ್ಸಾಹಿ ಯುವಕರ ತಂಡದೊಂದಿಗೆ ಭತ್ತದ ಕೃಷಿಗೆ ಚಾಲನೆ ನೀಡಲಾಯಿತು.
ಗುರುವಾರ ನಾಟಿ ಉತ್ಸವ ಕಾರ್ಯಕ್ರಮದಂಗವಾಗಿ ಕೊಡ್ಯಮೆ ಇರ್ನಿರಾಯರ ಮನೆಯಲ್ಲಿ ನಡೆದ ಸಭಾ ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದ ಕಾಸರಗೋಡು ಜಿಲ್ಲಾ ಪಂಚಾಯತಿ ಸದಸ್ಯ ನ್ಯಾಯವಾದಿ ಕೆ. ಕಾಂತ್ ಮಾತನಾಡಿ, ದೇಶದ ಪ್ರಧಾನ ಮಂತ್ರಿಗಳಾದ ನರೇಂದ್ರ ಮೋದಿಯವರ ಆಶಯದಂತೆ ಭಾರತದ ಪ್ರತಿಯೊಬ್ಬ ನಾಗರಿಕರು ಸ್ವಾವಲಂಬಿಗಳಾಗಲು ಇಂತಹ ಕೃಷಿರಂಗದ ಸಮಗ್ರ ತೊಡಗಿಸುವಿಕೆ "ಆತ್ಮನಿರ್ಬರ್ ಭಾರತ" ಕ್ಕೆ ಇಮ್ಮಡಿ ಮೌಲ್ಯ ದೊರೆತಂತಾಗುತ್ತದೆ ಎಂಬ ಆಶಯ ವ್ಯಕ್ತಪಡಿಸಿ, ಈ ಮಹತ್ ಕಾರ್ಯದಲ್ಲಿ ಸಹಕರಿಸಿದ ಎಲ್ಲಾ ತಂಡಕ್ಕೆ ಅಭಿನಂದನೆಯನ್ನು ಸಲ್ಲಿಸಿದರು.
ಅಧ್ಯಕ್ಷತೆ ವಹಿಸಿದ ಕುಂಬಳೆ ಗ್ರಾ.ಪಂ.ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಮಾತನಾಡಿ, ಆಹಾರ ಬೆಳೆಗಳ ಬಗ್ಗೆ ನಾವಿಂದು ಹೆಚ್ಚು ಆಸಕ್ತರಾಗಬೇಕು. ಯುವ ಸಮೂಹ ಉತ್ಸಾಹದಿಂದ ಅಲ್ಪಾವಧಿ ಆಹಾರ ಬೆಳೆಗಳನ್ನು ಉತ್ಪಾದಿಸುವ ಪಣ ತೊಡಬೇಕು ಎಂದರು. ಇಂತಹ ಕೃಷಿಕಾರ್ಯಕ್ಕೆ ಕುಂಬಳೆ ಗ್ರಾಮ ಪಂಚಾಯತಿ ವತಿಯಿಂದ ಸರ್ವರೀತಿಯ ಸಹಾಯ ಸಹಕಾರ ನೀಡುವುದಾಗಿ ಭರವಸೆ ನೀಡಿದರು.
ಕಾಸರಗೋಡು ಬ್ಲಾಕ್ ಪಂಚಾಯತಿ ಸದಸ್ಯ ಸತ್ಯಶಂಕರ ಭಟ್, ಕುಂಬಳೆ ಗ್ರಾಮ ಪಂಚಾಯತಿ ಸದಸ್ಯ ಸುಧಾಕರ ಕಾಮತ್, ಸುಜಿತ್ ರೈ, ಪುಷ್ಪಲತಾ ಸುರೇಶ, ಕಾಸರಗೋಡು ಕೃಷಿ ಇಲಾಖೆಯ ಉಪ ನಿರ್ದೇಶಕ ಆನಂದ್, ಕುಂಬಳೆ ಕೃಷಿ ಅಧಿಕಾರಿಗಳಾದ ನಾಣು ಕುಟ್ಟನ್, ವಿಜಯಕುಮಾರಿ ಕೆ.ಕೆ, ಕುಂಬಳೆ ಸಹಕಾರಿ ಬ್ಯಾಂಕ್ ನಿರ್ದೇಶಕ ರವಿ ಪೂಜಾರಿ, ಕೋಟೆಕ್ಕಾರ್ ಕೃಷಿ ಸಮಿತಿಯ ಅಧ್ಯಕ್ಷ ಇಬ್ರಾಹಿಂ ಹಾಜಿ, ಪೆರ್ಣೆ ಮುಚ್ಚಿಲೋಟ್ ಕ್ಷೇತ್ರದ ಅರ್ಚಕ ನಾರಾಯಣ ಪಾಟಾಳಿ ಮೊದಲಾದವರು ಉಪಸ್ಥಿತರಿದ್ದು ಶುಭಾಶಂಸನೆಗೈದರು. ಪ್ರಸ್ತುತ ಭತ್ತದ ಕೃಷಿಗೆ ಸಂಪೂರ್ಣ ಸಹಕಾರ ನೀಡುತ್ತಿರುವ ತ್ಯಾಂಪಣ್ಣ ರೈ, ರಮಾನಾಥ ಗಟ್ಟಿ, ದಯಾನಂದ ಗಟ್ಟಿ ಇನ್ನಿತರರು ಉಪಸ್ಥಿತರಿದ್ದರು. ಗ್ರಾಮ ಪಂಚಾಯತಿ ಸದಸ್ಯ ಹರೀಶ ಗಟ್ಟಿ ಸ್ವಾಗತಿಸಿ, ಹರಿಪ್ರಸಾದ್ ಭಟ್ ವಂದಿಸಿದರು.
ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲಾ ಗಣ್ಯ ಅತಿಥಿಗಳು ಮತ್ತು ಸಾರ್ವಜನಿಕರು ಕೆಸರುಗದ್ದೆಗಿಳಿದು ನೇಜಿನೆಟ್ಟು ಸಂಭ್ರಮಿಸಿದರು.