ತಿರುವನಂತಪುರ: ಕೋವಿಡ್ ಹಿನ್ನೆಲೆಯಲ್ಲಿ ಪಡಿತರ ಚೀಟಿ ಹೊಂದಿರುವವರಿಗೆ ಸರ್ಕಾರ ಒದಗಿಸುವ ಆಹಾರ ಕಿಟ್‍ಗಳ ಬದಲು ರಾಜ್ಯ ಸರ್ಕಾರವು ಸಪ್ಲೈಕೊಗೆ ಕೂಪನ್‍ಗಳನ್ನು ಒದಗಿಸಬೇಕು ಎಂಬ ಶಿಫಾರಸು ಮಾಡಲಾಗಿದೆ. ಕಿಟ್ ನಷ್ಟೇ ಬೆಲೆಯ ಕೂಪನ್ ಗಳನ್ನು ನೀಡಲು ಕೇರಳ ನಾಗರಿಕ ಸರಬರಾಜು ಅಧಿಕಾರಿಗಳ ಸಂಘವು ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕಿಟ್ ರೂಪದಲ್ಲಿ ಸರಕುಗಳನ್ನು ವಿತರಿಸುವ ಬದಲು ಕೂಪನ್‍ಗಳನ್ನು ನೀಡುವ ಮೂಲಕ ತಿಂಗಳಿಗೆ 16 ಕೋಟಿಯಿಂದ 20 ಕೋಟಿ ರೂ.ಗಳ ಲಾಭ ಗಳಿಸಬಹುದು ಎಂದು ಸಂಘವು ಮುಖ್ಯಮಂತ್ರಿ ಮತ್ತು ಆಹಾರ ಸಚಿವರಿಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದೆ. ಮುಂದಿನ ನಾಲ್ಕು ತಿಂಗಳಲ್ಲಿ ರಾಜ್ಯದ 88 ಲಕ್ಷ ಪಡಿತರ ಚೀಟಿದಾರರಿಗೆ ಆಹಾರ ಕಿಟ್‍ಗಳನ್ನು ನೀಡಲು ಸರ್ಕಾರ ನಿರ್ಧರಿಸಿರುವ ಹಿನ್ನೆಲೆಯಲ್ಲಿ ಈ ಶಿಫಾರಸು ಮಾಡಲಾಗಿದೆ.
ಆದರೆ ಓಣಂ ಕಿಟ್ ಪೂರೈಕೆ ಪೂರ್ಣಗೊಳ್ಳದಿರುವುದರಿಂದ ಸಪ್ಲೈಕೊ ಮುಂದಿನ ಕಿಟ್ ಗಳ ಸರಬರಾಜಿಗೆ ಇನ್ನಷ್ಟೇ ಮುಂದಾಗಬೇಕಿದೆ. ಓಣಂ ಸಂದರ್ಭ ವಿತರಿಸಲಾಗಿದ್ದ ಕಿಟ್ ನ ಗುಣಮಟ್ಟ ಮತ್ತು ಕಿಟ್ ನ ಮೌಲ್ಯದ ಬಗ್ಗೆ ಭಾರಿ ಆರೋಪಗಳು ಕೇಳಿಬಂದಿದ್ದವು. ಇಂತಹ ಸ್ಥಿತಿಯಲ್ಲಿ ನಾಗರಿಕ ಸರಬರಾಜು ನೌಕರರು ಅನುಭವಿಸುವ ಮಾನಸಿಕ ಕಿರುಕುಳಕ್ಕೆ ಪರಿಹಾರವಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ. ಕೂಪನ್ ನೀಡಿದರೆ ಕಿಟ್ ನಲ್ಲಿರುವ ವಸ್ತುಗಳನ್ನು ಅಥವಾ ಇತರ ಬದಲಿ ವಸ್ತುಗಳು, ಔಷಧಿಗಳನ್ನು ಗ್ರಾಹಕರು ಅವರವರ ಆಸಕ್ತಿಯ ಸಪ್ಲೈಕೊ ಮಳಿಗೆಗಳಿಂದ ಖರೀದಿಸಬಹುದು. ಗ್ರಾಹಕರು ಕೂಪನ್ ನ ಮೌಲ್ಯಕ್ಕಿಂತ ಹೆಚ್ಚಿನದನ್ನು ಖರೀದಿಸಿದರೆ ಸಪ್ಲೈಕೊ ವಹಿವಾಟು ಹೆಚ್ಚಳಗೊಳಿಸುತ್ತದೆ. ಕೂಪನ್ ನ್ನು ಹಿಂದಿರುಗಿಸುವ ಮೂಲಕ 'ಆರ್ಥಿಕವಾಗಿ ಸುರಕ್ಷಿತ' ಎಂಬ ಮಾನದಂಡದಡಿ ಸರ್ಕಾರಕ್ಕೆ ಸಹಾಯ ಮಾಡಬಹುದು ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ರಾಜ್ಯ ಸರ್ಕಾರ ಪ್ರಸ್ತುತ 88 ಲಕ್ಷ ಪಡಿತರ ಚೀಟಿದಾರರನ್ನು ಹೊಂದಿದ್ದು ಎಂಟು ವಸ್ತುಗಳನ್ನು ಹೊಂದಿರುವ ಕಿಟ್‍ಗಳನ್ನು ವಿತರಿಸುತ್ತಿದೆ. ಓಣಂ ಕಿಟ್ ಮಾದರಿಯಲ್ಲಿ ಇನ್ನೂ ನಾಲ್ಕು ತಿಂಗಳು ಆಹಾರ ಕಿಟ್ ಗಳನ್ನು ವಿತರಿಸಲು ಸರ್ಕಾರ ಶುಕ್ರವಾರ ಆದೇಶಿಸಿತ್ತು. ಕಿಟ್ ವಿತರಣೆಯನ್ನು ಸಪ್ಲೈಕೊಗೆ ನೀಡಲಾಗಿದೆ. ಕೋವಿಡ್ ಲಾಕ್ ಡೌನ್ ನಿಂದ ಉಂಟಾದ ಸಂಕಷ್ಟದಿಂದ ಜನಸಾಮಾನ್ಯರಿಗೆ ನೆರವಾಗಿ ಸರ್ಕಾರವು ಆಹಾರ ಕಿಟ್‍ಗಳನ್ನು ವಿತರಿಸುತ್ತಿದೆ ಎಂದು ಪಿ.ಆರ್.ಡಿ. ಪ್ರಕಟಣೆಯಲ್ಲಿ ವಿವರಿಸಲಾಗಿದೆ.