ಕಾಸರಗೋಡು: ಕಾಸರಗೋಡು ಜಿಲ್ಲೆಯಲ್ಲಿ ನಡೆಯುತ್ತಿರುವ ಜನಜಾಗೃತಿ ಚಟುವಟಿಕೆಗಳಲ್ಲಿ ಮಾಸ್ಟರ್ ಯೋಜನೆ ಮೊದಲಿಗ ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಜಿಲ್ಲಾಧಿಕಾರಿ ಕಚೇರಿಯಲ್ಲಿ ಬುಧವಾರ ಜರಗಿದ ಐ.ಇ.ಸಿ. ಸಂಚಲ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.
ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ನಡೆಯುತ್ತಿರುವ ಜನಜಾಗೃತಿ ಚಟುವಟಿಕೆಗಳಲ್ಲಿ ಮಾಸ್ಟರ್ ಯೋಜನೆ ವಿಭಿನ್ನ ರೀತಿಯಲ್ಲಿ ಜಾರಿಯಲ್ಲಿದೆ. ಮಾಸ್ಕ್, ಸಾನಿಟೈಸರ್ ಬಳಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ, ಕೋವಿಡ್ ಸಂಹಿತೆ ಉಲ್ಲಂಘನೆ ಕಂಡುಬಂದಲ್ಲಿ ಅಧಿಕಾರಿಗಳ ಗಮನಕ್ಕೆ ತರುವುದು ಇತ್ಯಾದಿಗಳ ಮೂಲಕ ಮಾಸ್ಟರ್ ಯೋಜನೆ ವ್ಯಾಪಕ ಜನಮನ್ನಣೆಗೆ ಪಾತ್ರವಾಗಿದೆ ಎಂದರು.
ಕೋವಿಡ್ ವಿರುದ್ಧ ಜಾಗೃತಿ ಮೂಡಿಸುವಲ್ಲಿ ಐ.ಇ.ಸಿ. ಸಂಚಲನ ಸಮಿತಿಯ ಚಟುವಟಿಕೆಗಳು ಶ್ಲಾಘನೀಯ ಎಂದು ಸಭೆ ಮೆಚ್ಚುಗೆ ವ್ಯಕ್ತಪಡಿಸಿದೆ. ಐ.ಇ.ಸಿ.ಯ ನೇತೃತ್ವದಲ್ಲಿ ಕೇರಳ ತುಳು ಅಕಾಡೆಮಿ ನಿರ್ಮಿಸಿರುವ ತುಳು ಕಿರುಚಿತ್ರ, ವೀಡಿಯೋ ಟ್ರಾಲ್ ಗಳು ಇತ್ಯಾದಿಗಳು ಸಮಾಜದಲ್ಲಿ ಪರಿಣಾಮ ಮೂಡಿಸಿವೆ. ಕನ್ನಡದಲ್ಲೂ ಜನಜಾಗೃತಿ ಮೂಡಿಸುವ ಹೊಣೆಗಾರಿಕೆಯನ್ನು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರಿಗೆ ವಹಿಸಲಾಗಿದೆ.
ಸಂಪರ್ಕ ಮೂಲಕ ಸೋಂಕು ಅಧಿಕಗೊಳ್ಳುತ್ತಿದ್ದರೂ, ಸಾರ್ವಜನಿಕ ಬದುಕು ದುಸ್ತರವಾಗುತ್ತಿರುವ ಹಿನ್ನೆಲೆಯಲ್ಲಿ ಕಟ್ಟುನಿಟ್ಟುಗಳಲ್ಲಿ ಹೆಚ್ಚುವರಿ ಸಡಿಲಿಕೆ ಮಂಜೂರುಮಾಡಲಾಗಿದೆ. ಆದರೆ ಈ ಸಡಿಲಿಕೆಯನ್ನು ಜನ ಯಾವ ಕಾರಣಕ್ಕೂ ದುರುಪಯೋಗ ನಡೆಸಕೂಡದು. ಸಾರ್ವಜನಿಕ ಸಮಾರಂಭಗಳು 1000 ಚದರ ಅಡಿ ವಿಸ್ತೀರ್ಣದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು 15 ಮಂದಿ ಮಾತ್ರ ಭಾಗವಹಿಸುವ ಮೂಲಕ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು, ಐ.ಇ.ಸಿ. ಸಂಚಲನ ಸಮಿತಿ ಸಂಚಾಲಕ ಮಧುಸೂದನನ್ ಎಂ., ಮಾಸ್ ಮೀಡಿಯಾ ಅಧಿಕಾರಿ ಅಬ್ದುಲ್ ಲತೀಫ್, ಸಹಾಯಕ ಮಾಸ್ ಮೀಡಿಯಾ ಅಧಿಕಾರಿ ಸಯಾನಾ, ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್, ಮಾಸ್ಟರ್ ಯೋಜನೆಯ ಜಿಲ್ಲಾ ಸಂಚಾಲಕ ಪಿ.ದಿಲೀಪ್ ಕುಮಾರ್, ಕೆ.ಎಸ್.ಎಸ್.ಎಂ. ಸಂಚಾಲಕ ಜಿಷೋ ಜೇಮ್ಸ್, ಇತರ ಸದಸ್ಯರು ಉಪಸ್ಥಿತರಿದ್ದರು.