ಕುಂಬಳೆ: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಕನ್ನಡ ಅರಿಯದ ಅಧ್ಯಾಪಕನೋರ್ವನನ್ನು ನೇಮಿಸುವಂತೆ ಮಾನವ ಹಕ್ಕು ಆಯೋಗದ ತೀರ್ಪಿನ ವಿರುದ್ಧ ಜನರಲ್ಲಿ ಜಾಗೃತಿ ಮೂಡಿಸುವ ಹಾಗು ಇದರ ವಿರುದ್ಧ ನ್ಯಾಯಾಲಯದ ಮೆಟ್ಟಲೇರುವ ಬಗ್ಗೆ ಕನ್ನಡ ಹೋರಾಟ ಸಮಿತಿಯ ತುರ್ತು ಸಭೆಯಲ್ಲಿ ತೀರ್ಮಾನಿಸಲಾಯಿತು.
ಕನ್ನಡ ಹೋರಾಟ ಸಮಿತಿಯ ಉಪಾಧ್ಯಕ್ಷ ಎಂ.ವಿ.ಮಹಾಲಿಂಗೇಶ್ವರ ಭಟ್ ಅವರ ನಿವಾಸದಲ್ಲಿ ಶನಿವಾರ ನಡೆದ ಸಭೆಯಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯಿಂದ ಎದುರಾಗಲಿರುವ ಸಮಸ್ಯೆಗಳ ಬಗ್ಗೆ ಜಾಗೃತಿ ವಹಿಸಲು, ಮಲಯಾಳ ಅಧ್ಯಾಪಕನ ನೇಮಕದ ವಿರುದ್ಧ ಪ್ರತ್ಯಕ್ಷ ಹೋರಾಟ ನಡೆಸಲು ತೀರ್ಮಾನಿಸಲಾಯಿತು.
ಕರ್ನಾಟಕ ಸಿಇಟಿ ಯಲ್ಲಿ ನಕಲಿ ಸರ್ಟಿಫಿಕೇಟ್‍ಗಳ ಮೂಲಕ ಸೀಟು ಪಡೆದು ಕೊಳ್ಳುವ ಬಗ್ಗೆ ಕರ್ನಾಟಕ ಸರ್ಕಾರದ ಗಮನಕ್ಕೆ ತರಲು ತೀರ್ಮಾನಿಸಲಾಯಿತು. ಮುಂದಿನ ತ್ರಿಸ್ತರ ಚುನಾವಣೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಅಭ್ಯರ್ಥಿಗಳನ್ನೇ ಕಣಕ್ಕಿಳಿಸುವಂತೆ ವಿನಂತಿಸಲಾಯಿತು. ಕನ್ನಡ ಹೋರಾಟ ಸಮಿತಿಯನ್ನು ಸ್ಥಳೀಯ ಮಟ್ಟದಿಂದಲೇ ಬಲ ಪಡಿಸಲು ತೀರ್ಮಾನಿಸಲಾಯಿತು.
ಕೋವಿಡ್ ಹಿನ್ನೆಲೆಯಲ್ಲಿ ಆರ್ಥಿಕ ಕ್ರೋಢೀಕರಣದ ಅಲಭ್ಯತೆ(ಜಾಹೀರಾತು) ಕಾರಣ ನೀಡಿ ಕನ್ನಡ ಮಾಧ್ಯಮ ಪತ್ರಿಕೆಗಳ ಜಿಲ್ಲಾ ಕಾರ್ಯಾಲಯಗಳನ್ನು ಮುಚ್ಚಿರುವುದು ಗಡಿನಾಡು ಕನ್ನಡಿಗರ ಅಸ್ಮಿತೆಯ ಹೊಡೆತಕ್ಕೆ ಕಾರಣವಾಗಿದ್ದು, ಈ ಬಗ್ಗೆ ಕನ್ನಡ ಪತ್ರಿಕೆಗಳ ಸಂಬಂಧಪಟ್ಟ ಅಧಿಕೃತರಿಗೆ ಮನವಿ ನೀಡುವ ಬಗ್ಗೆ ತೀರ್ಮಾನಿಸಲಾಯಿತು.
ಸಭೆಯಲ್ಲಿ ಎಂ.ವಿ.ಮಹಾಲಿಂಗೇಶ್ವರ ಭಟ್ ಅವರು ಅಧ್ಯಕ್ಷತೆ ವಹಿಸಿದರು. ಸಾಹಿತಿ ವಿ.ಬಿ.ಕುಳಮರ್ವ, ಪ್ರದೀಪ್ ಕುಮಾರ್ ಶೆಟ್ಟಿ ಬೇಳ, ಜಲಜಾಕ್ಷಿ, ಶ್ರೀಶ ಕುಮಾರ್ ಪಂಜಿತ್ತಡ್ಕ, ಗೋಪಾಲ ಶೆಟ್ಟಿ ಅರಿಬೈಲು, ಪೆÇ್ರ.ಎ.ಶ್ರೀನಾಥ್, ಪುರುಷೋತ್ತಮ ಭಟ್, ರಾಜಾರಾಮ ಮಧ್ಯಸ್ಥ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಸದಾಶಿವ ರಾವ್. ಲಕ್ಷ್ಮಣ ಪ್ರಭು ಕುಂಬಳೆ ಮೊದಲಾದವರು ಮಾತನಾಡಿದರು.
ಸತೀಶ್ ಮಾಸ್ತರ್ ಕೂಡ್ಲು ಅವರು ಸ್ವಾಗತಿಸಿ, ಪ್ರಭಾವತಿ ಕೆದಿಲಾಯ ವಂದಿಸಿದರು. ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ ಕಾಸರಗೋಡು ಕಾರ್ಯಕ್ರಮ ನಿರೂಪಿಸಿದರು.