ಕೊಚ್ಚಿ : ಕೊರೋನಾ ಸೋಂಕು ಸಾಮೂದಾಯಿಕವಾಗಿ ಹರಡುವುದನ್ನು ತಡೆಯುವ ಸಲುವಾಗಿ ದೇಶದ ಮೇಲೆ ವಿಧಿಸಲಾಗಿದ್ದ ಲಾಕ್‌ಡೌನ್ ಕರಿಛಾಯೆಯನ್ನು ಹಂತಹಂತವಾಗಿ ತೆರವುಗೊಳಿಸಲಾಗುತ್ತಿದ್ದು, ಪ್ರಸ್ತುತ ದೇಶದಲ್ಲಿ ಅನ್‌ಲಾಕ್ ಪ್ರಕ್ರಿಯೆ-04 ಚಾಲನೆಯಲ್ಲಿದೆ. ಲಾಕ್‌ಡೌನ್ ತೆರವಾಗಿದ್ದರೂ ಸಹ ಎಲ್ಲಾ ರಾಜ್ಯಗಳು ಸಾಮಾನ್ಯವಾಗಿ ಪ್ರವಾಸೋದ್ಯಮಕ್ಕೆ ವಿಧಿಸಿದ್ದ ತಡೆಯನ್ನು ತೆಗೆದಿರಲಿಲ್ಲ. ಹೀಗಾಗಿ ಎಲ್ಲಾ ರಾಜ್ಯಗಳು ಆರ್ಥಿಕವಾಗಿ ಸಾಕಷ್ಟು ನಷ್ಟ ಅನುಭವಿಸಿದ್ದವು. ಹೀಗಾಗಿ ಸೆಪ್ಟೆಂಬರ್ 1 ರಿಂದ ಚಾಲನೆಯಲ್ಲಿರುವ ಅನ್‌ಲಾಕ್ ಪ್ರಕ್ರಿಯೆ-04ಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಮಾರ್ಗಸೂಚಿಯನ್ನೂ ಸಹ ಬಿಡುಗಡೆ ಮಾಡಿದೆ. ಈ ಮಾರ್ಗಸೂಚಿಯಲ್ಲಿ ಎಲ್ಲಾ ರಾಜ್ಯಗಳಿಗೆ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದ್ದು, ಪರಿಣಾಮ ದೇವರನಾಡು ಎಂದೇ ಖ್ಯಾತಿ ಪಡೆದಿರುವ ಕೇರಳ ಅಕ್ಟೋಬರ್ ತಿಂಗಳಿನಿಂದ ತಮ್ಮ ರಾಜ್ಯದಲ್ಲಿ ಪ್ರವಾಸೋಧ್ಯಮವನ್ನು ಅಧಿಕೃತವಾಗಿ ಆರಂಭಿಸುವುದಾಗಿ ತಿಳಿಸಿದೆ.
ಈ ಸಂಬಂಧ ಮಾತನಾಡಿರುವ ಕೇರಳ ರಾಜ್ಯದ ಪ್ರವಾಸೋದ್ಯಮ ಸಚಿವ ಕಡಕಂಪಲ್ಲಿ ಸುರೇಂದ್ರನ್, "ಅಕ್ಟೋಬರ್‌ನಿಂದ ರಾಜ್ಯದಲ್ಲಿ ಮತ್ತೆ ಪ್ರವಾಸೋದ್ಯಮಕ್ಕೆ ಅವಕಾಶ ನೀಡಲಾಗಿದೆ. ಹೀಗಾಗಿ ಪ್ರವಾಸೋದ್ಯಮ ಇಲಾಖೆಯು ಮತ್ತೆ ರಾಜ್ಯಕ್ಕೆ ಪ್ರಯಾಣಿಕರನ್ನು ಆಕರ್ಷಿಸುವ ಅಭಿಯಾನಗಳನ್ನು ಸಿದ್ಧಪಡಿಸುವಲ್ಲಿ ತೊಡಗಿದೆ. ಸಾಂಕ್ರಾಮಿಕ ರೋಗದ ದೃಷ್ಟಿಯಿಂದ ಹಲವಾರು ಎಚ್ಚರಿಕೆಗಳೊಂದಿಗೆ ಪ್ರವಾಸಕ್ಕೆ ಅನುಮತಿ ನೀಡಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.
ಭಾರತೀಯ ಕೈಗಾರಿಕಾ ಒಕ್ಕೂಟದ (ಸಿಐಐ) ಪ್ರವಾಸೋದ್ಯಮ ಸಮಿತಿ ಸದಸ್ಯರೊಂದಿಗೆ ನಡೆದ ಆನ್‌ಲೈನ್ ಸಭೆಯಲ್ಲಿ ಈ ವಿಚಾರವನ್ನು ಸಚಿವರು ತಿಳಿಸಿದ್ದಾರೆ. ಅಲ್ಲದೆ, ಈ ಸಂಬಂಧದ ಕಡತವನ್ನು ಮುಖ್ಯಮಂತ್ರಿಗಳ ಅನುಮೋದನೆಗಾಗಿಯೂ ಕಳುಹಿಸಲಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.ದೀಪಾವಳಿ ರಜಾದಿನಗಳಿಗೆ ಬರುವ ಇತರ ರಾಜ್ಯಗಳ ಪ್ರವಾಸಿಗರು ಮತ್ತು ಡಿಸೆಂಬರ್-ಜನವರಿ ಋತುವಿನಲ್ಲಿ ಕೇರಳಕ್ಕೆ ಬರಲು ವಿದೇಶಿ ಪ್ರವಾಸಿಗರು ಬುಕಿಂಗ್ ಮಾಡುವುದರಿಂದ, ಕೇರಳದಲ್ಲಿ ಪ್ರವಾಸೋದ್ಯಮ ಚಟುವಟಿಕೆಗಳನ್ನು ಪ್ರಾರಂಭಿಸಲು ನಿರ್ದಿಷ್ಟ ದಿನಾಂಕವನ್ನು ಘೋಷಿಸಬೇಕಾಗಿದೆ ಎಂದು ಕೇರಳ ಕೈಗಾರಿಕಾ ಒಕ್ಕೂಟದ ಪದಾಧಿಕಾರಿಗಳು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಪ್ರವಾಸೋದ್ಯಮ ಯಾವಾಗ ಆರಂಭವಾಗುತ್ತದೆ ಎಂಬುದರ ಬಗ್ಗೆ ಖಚಿತತೆ ಇದ್ದಲ್ಲಿ ಮಾತ್ರ ನಾವು ಬುಕಿಂಗ್ ತೆಗೆದುಕೊಳ್ಳಬಹುದು. ಪ್ರವಾಸೋದ್ಯಮವು ಪ್ರಮುಖ ಉದ್ಯಮವಾಗಿರುವ ಇತರ ರಾಜ್ಯಗಳು ಈಗಾಗಲೇ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕಿದೆ, ಈ ನಿಟ್ಟಿನಲ್ಲಿ ಕೇರಳವು ಸಹ ಮುಂದಾಗಬೇಕು ಎಂದು ಕೈಗಾರಿಕಾ ಒಕ್ಕೂಟದ ಪದಾಧಿಕಾರಿಗಳು ಮನವಿ ಮಾಡಿದ್ದಾರೆ ಎನ್ನಲಾಗುತ್ತಿದೆ.
ಕೇರಳದ ಪ್ರವಾಸೋದ್ಯಮದ ಬೇಡಿಕೆಗಳಲ್ಲಿ ಪ್ರಮುಖವಾದುದ್ದು ಪ್ರವಾಸಿಗರಿಗೆ ಕ್ಯಾರಂಟೈನ್‌ನಿಂದ ವಿನಾಯಿತಿ ನೀಡಬೇಕು ಎಂಬುದುದಾಗಿದೆ. ಅವರನ್ನು ವ್ಯಾಪಾರ-ವಾಣಿಜ್ಯ ವ್ಯವಹಾರಗಳಿಗೆ ಬರುವ ಪ್ರವಾಸಿಗರಂತೆ ಪರಿಗಣಿಸಲು ಮನವಿ ಮಾಡಲಾಗಿದೆ. ಜೊತೆಗೆ ಈ ವಲಯದ ಉದ್ಯಮಿಗಳಿಗೆ ಸಾಲ ಮಂಜೂರು ಮಾಡುವಂತೆ ರಾಜ್ಯ ಮಟ್ಟದ ಬ್ಯಾಂಕರ್‌ಗಳ ಸಮಿತಿಗೆ ಸರ್ಕಾರ ನಿರ್ದೇಶನ ನೀಡುವಂತೆಯೂ ಒತ್ತಾಯಿಸಲಾಗಿದೆ.
ಸರ್ಕಾರ ದಿನಾಂಕ ಘೋಷಿಸದಿದ್ದರೂ ಅಕ್ಟೋಬರ್ ನಿಂದ ಪ್ರವಾಸೋದ್ಯಮಕ್ಕೆ ಚಾಲನೆ ಸಿಗುವುದು ಖಚಿತ ಎನ್ನಲಾಗುತ್ತಿದೆ.