ಕೊಚ್ಚಿ: ಚಿನ್ನ ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು ಉನ್ನತ ಶಿಕ್ಷಣ ಸಚಿವ ಕೆ.ಟಿ.ಜಲೀಲ್ ಅವರನ್ನು ಶುಕ್ರವಾರ ಪ್ರಶ್ನಿಸಿದೆ ಎಂದು ವರದಿಯಾಗಿದೆ. ರಾಜ್ಯ ಸಚಿವ ಸಂಪುಟದ ಮಂತ್ರಿಯೋರ್ವರನ್ನು ಜಾರಿ ¸ನಿರ್ದೇಶನಾಲಯ ಪ್ರಶ್ನಿಸಿರುವುದು ಇದೇ ಮೊತ್ತಮೊದಲಬಾರಿಯಾಗಿದೆ.
ಶುಕ್ರವಾರ ಬೆಳಿಗ್ಗೆ ಕೊಚ್ಚಿಯ ಇಡಿ ಕಚೇರಿಯಲ್ಲಿ ಸಚಿವರನ್ನು ಪ್ರಶ್ನಿಸಲಾಗಿದೆ ಎಂಬ ಮಾಹಿತಿಯನ್ನು ಜಾರಿ ನಿರ್ದೇಶನಾಲಯ ಖಚಿತಪಡಿಸಿದೆ. ವರದಿಯ ಪ್ರಕಾರ, ರಾಜತಾಂತ್ರಿಕ ಸಾಮಾನುಗಳಿಗೆ ಸಂಬಂಧಿಸಿದಂತೆ ವಿಚಾರಣೆ ನಡೆದಿದ್ದು, ಬಳಿಕ ಸಚಿವರು ಮಲಪ್ಪುರಂಗೆ ಮರಳಿದರು. ಪ್ರಾಥಮಿಕ ಹಂತದಲ್ಲಿ ಮಾಹಿತಿಗಳನ್ನಷ್ಟೇ ಸಂಗ್ರಹಿಸಲಾಗಿದೆ ಮತ್ತು ಅಗತ್ಯವಿದ್ದರೆ ಸಚಿವರನ್ನು ಮರಳಿ ಕರೆಯಲಾಗುತ್ತದೆ ಎಂದು ಇಡಿ ತಿಳಿಸಿದೆ. ಸಚಿವರ ವಿಚಾರಣೆ ಶುಕ್ರವಾರ ಬೆಳಿಗ್ಗೆ 9.30 ಕ್ಕೆ ಪ್ರಾರಂಭವಾಯಿತು ಎಂದು ದೃಢಪಡಿಸಲಾಗಿದೆ.
ಸಚಿವ ಕೆ.ಟಿ.ಜಲೀಲ್ ಅವರು ರೆಡ್ ಕ್ರೆಸೆಂಟ್‍ನಿಂದ ಧನಸಹಾಯ ಪಡೆದ ಲೈಫ್ ಮಿಷನ್ ವಸತಿ ಯೋಜನೆಯ ಅನುಷ್ಠಾನಕ್ಕೆ ಸಂಬಂಧಿಸಿದ ವಿವಾದದಲ್ಲಿ ಸಿಲುಕಿದ್ದರು. ಚಿನ್ನದ ಕಳ್ಳಸಾಗಣೆ ಪ್ರಕರಣದ ತನಿಖೆಯ ವೇಳೆ, ತಿರುವನಂತಪುರದ ಯುಎಇ ದೂತಾವಾಸದ ಮೂಲಕ ಜಲೀಲ್ ಧಾರ್ಮಿಕ ಪುಸ್ತಕಗಳು ಮತ್ತು ರಂಜಾನ್ ಕಿಟ್‍ಗಳನ್ನು ಸಂಗ್ರಹಿಸಿರುವುದು ಇಡಿಗೆ ಕಂಡುಬಂದಿದೆ. ಕಸ್ಟಮ್ಸ್ ಮತ್ತು ಜಾರಿ ನಿರ್ದೇಶನಾಲಯವು ಧಾರ್ಮಿಕ ಗ್ರಂಥಗಳ ಹೆಸರಿನಲ್ಲಿ ಯುಎಇಯಿಂದ ರಾಜತಾಂತ್ರಿಕ ಸಾಮಾನುಗಳಲ್ಲಿ ಬಂದ ವಸ್ತುಗಳನ್ನು ತನಿಖೆ ನಡೆಸುತ್ತಿದೆ. ಸಚಿವ ಜಲೀಲ್ ಅವರು ಕೇಂದ್ರ ಸರ್ಕಾರದ ಅನುಮತಿಯಿಲ್ಲದೆ ಯುಎಇಯಿಂದ ಹಣಕಾಸಿನ ನೆರವು ಪಡೆದ ಆರೋಪ ಎದುರಿಸುತ್ತಿದ್ದಾರೆ.
ಈ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಸುರೇಂದ್ರನ್ ಅವರು ಪ್ರಕರಣವನ್ನು ಬಲವಾಗಿ ಖಂಡಿಸಿದ್ದು ಈ ಕೂಡಲೇ ಸಚಿವ ಜಲೀಲ್ ಅವರು ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿರುವರು. ಅಲ್ಲದೆ ಈ ಬಗ್ಗೆ ಮುಖ್ಯಮಂತ್ರಿ ಮೌನವಹಿಸಿರುವುದು ಸಂಶಯಕರವಾಗಿದೆ. ಬಿಜೆಪಿ ರಾಜೀನಾಮೆ ನೀಡುವಲ್ಲಿ ವರೆಗೆ ಉಗ್ರ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.
ಯುಡಿಎಫ್ ಸಚಿವರ ದೇಶವಿರೋಧಿ ಕ್ರಮವನ್ನು ಖಂಡಿಸಿದ್ದು ರಾಜೀನಾಮೆಗೆ ಆಗ್ರಹಿಸಿದೆ.