ನವದೆಹಲಿ: ಕೊರೋನಾ ಸೋಂಕು ಲಕ್ಷಣಗಳಿದ್ದೂ ಕೂಡ ಆರ್-ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿರುವವರನ್ನು ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ ಎಂದು ಕೇಂದ್ರ ಸರ್ಕಾರ ರಾಜ್ಯಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದೆ.
ಈ ಬಗ್ಗೆ ಕೇಂದ್ರ ಆರೋಗ್ಯ ಇಲಾಖೆ ಗುರುವಾರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಸೂಚನೆ ನೀಡಿದ್ದು, ಕೊರೋನಾ ಸೋಂಕು ಲಕ್ಷಣಗಳಿದ್ದೂ ಕೂಡ ಆರ್-ಟಿಪಿಸಿಆರ್ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿರುವವರನ್ನು ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಿಸಿ. ಯಾವುದೇ ಕಾರಣಕ್ಕೂ ಸೋಂಕಿತ ವ್ಯಕ್ತಿ ಚಿಕಿತ್ಸೆ ಪಡೆಯದೇ ಸಮಾಜದಲ್ಲಿ ತಿರುಗುವಂತಿಲ್ಲ. ಆತನಿಂದ ಇತರರಿಗೆ ಸೋಂಕು ಹರಡದಂತೆ ಮುಂಜಾಗ್ರತೆ ವಹಿಸುವುದು ಆಯಾ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಕರ್ತವ್ಯವಾಗಿದೆ. ಸೋಂಕು ತಡೆಯುವ ಈ ಕಾರ್ಯದಲ್ಲಿ ಯಾರನ್ನೂ ಕೂಡ ನಿರ್ಲಕ್ಷಿಸುವಂತಿಲ್ಲ ಎಂದು ಹೇಳಿದೆ.
ಐಸಿಎಂಆರ್ ಮಾರ್ಗದರ್ಶನದಂತೆ ಕೆಲವು ದೊಡ್ಡ ರಾಜ್ಯಗಳಲ್ಲಿ, ರಾಪಿಡ್ ಆಂಟಿಜೆನ್ ಟೆಸ್ಟ್ (ರಾಟ್) ಪರೀಕ್ಷೆ ನಡೆಯುತ್ತಿಲ್ಲ. ರ್ಯಾಪಿಡ್ ಆ್ಯಂಟಿಜೆನ್ ಪರೀಕ್ಷೆ ಮತ್ತು ಆರ್-ಟಿಪಿಸಿಆರ್ ಪರೀಕ್ಷೆಗಳಲ್ಲಿ ನೆಗೆಟಿವ್ ಬಂದ ಎರಡು ಮೂರು ದಿನಗಳಲ್ಲಿ ರೋಗಲಕ್ಷಣಗಳು ಗೋಚರಿಸುತ್ತಿವೆ. ಹೀಗಾಗಿ ರೋಗ ಲಕ್ಷಣಗಳು ಇರುವವರು ಕೂಡ ಮತ್ತೆ ಆ್ಯಂಟಿಜೆನ್ ಪರೀಕ್ಷೆಗೊಳಪಡಬೇಕು ಎಂದೂ ಆರೋಗ್ಯ ಇಲಾಖೆ ಹೇಳಿದೆ.