ಮಂಗಳೂರು: ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಹಾಗೂ ಹರಿಕಥಾ ಪರಿಷತ್(ರಿ) ಮಂಗಳೂರು ಜಂಟಿ ಪ್ರಾಯೋಜಕತ್ವದಲ್ಲಿ ಹಮ್ಮಿಕೊಂಡ ಹತ್ತು ದಿನಗಳ ‘ಹರಿಕಥೆ ಪರ್ಬ’ದ ಕಾರ್ಯಕ್ರಮವನ್ನು ತುಳು ಭವನದ ಸಿರಿ ಚಾವಡಿಯಲ್ಲಿ ಆಯೋಜಿಸಲಾಯಿತು.
ಎರಡನೆಯ ದಿನದ ಕಾರ್ಯಕ್ರಮವನ್ನು ಉದ್ಯಮಿ ಫಣಿಯೂರು ಕರುಣಾಕರ ಶೆಟ್ಟಿ ಉದ್ಘಾಟಿಸಿದರು. ‘ಕಲೆಗಳಲ್ಲಿ ಅತ್ಯಂತ ಸತ್ವಯುತವಾದ ಹರಿಕಥೆ ಕಲೆ ಮೌಲ್ಯಗಳನ್ನು ಕಥೆಗಳ ಮೂಲಕ ಪ್ರತಿಪಾದಿಸುವಂತಹುದು’ ಎಂದರು.
ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ದಯಾನಂದ ಜಿ.ಕತ್ತಲ್ಸಾರ್ ಅಧ್ಯಕ್ಷತೆಯನ್ನು ವಹಿಸಿ ‘ಎಲ್ಲ ಲಲಿತ ಕಲೆಗಳ ಶಿಕ್ಷಣ ಪ್ರದರ್ಶನ ಸಂವರ್ಧನಕ್ಕೆ ಒಂದು ಕೇಂದ್ರದ ಅಗತ್ಯವಿದ್ದು , ಸರ್ಕಾರದ ಸಹಾಯದಿಂದ ಅದನ್ನು ನಿರ್ಮಿಸಬೇಕಾಗಿದೆ’ ಎಂದರು.
ಅಧ್ಯಕ್ಷತೆ ವಹಿಸಿದ್ದ ಹರಿಕಥಾ ಪರಿಷತ್ತಿನ ಅಧ್ಯಕ್ಷ ಕೆ.ಮಹಾಬಲ ಶೆಟ್ಟಿ ‘ಹರಿಕಥೆಯನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಹಲವು ವಿಶಿಷ್ಟ ಪ್ರಯೋಗಗಳನ್ನು ಅಳವಡಿಸಿಕೊಳ್ಳಬೇಕಾಗಿದೆ’ ಎಂದರು.
ಮುಖ್ಯ ಅತಿಥಿಗಳಾಗಿ ಉದ್ಯಮಿ ಮಧುಸೂದನ ಆಯರ್ ಹಾಗೂ ವಕೀಲರಾದ ಶ್ರೀಧರ ಶೆಟ್ಟಿ ಪುಳಿಂಚ ಉಪಸ್ಥಿತರಿದ್ದರು. ಡಾ.ಎಸ್.ಪಿ.ಗುರುದಾಸ್ ಸ್ವಾಗತಿಸಿದರು. ಅಕಾಡೆಮಿ ಸದಸ್ಯ ನಿಟ್ಟೆಗುತ್ತು ಶಶಿಧರ್ ಶೆಟ್ಟಿ ನಿರೂಪಿಸಿದರು. ಬಳಿಕ ವಿದುಷಿ ಮಂಜುಳಾ ಜಿ.ರಾವ್ ಇರಾ ಇವರಿಂದ ‘ಗೋರಾ ಕುಂಬಾರೆ’ ಹರಿಕಥೆ ನಡೆಯಿತು. ಹಿಮ್ಮೇಳದಲ್ಲಿ ಸತ್ಯನಾರಾಯಣ ಐಲ ಹಾಗೂ ಜಗದೀಶ್ ಉಪ್ಪಳ ಸಹಕರಿಸಿದರು.