ಕಾಸರಗೋಡು: ಎಲ್ಲೆಡೆ ಕೋವಿಡ್ ಭೀತಿಯ ಮಧ್ಯೆ ಹಬ್ಬಾಚರಣೆಗಳು ಪೇಲವತೆಯೊಂದಿಗೆ ಸಾಂಕೇತಿಕವಾಗಿ ಆಚರಿಸಲ್ಪಡುತ್ತಿದ್ದರೆ ಇಲ್ಲೊಂದು ಕೌತುಕವೋ ಎಂಬಂತೆ ಪರಂಪರೆಯ ಬೃಹತ್ ಔತಣಕೂಟವೊಂದು ನಡೆದಿರುವುದು ಈ ಬಾರಿ ಯಾರ ಗಮನಕ್ಕೂ ಬಂದಂತಿಲ್ಲ!
ಅದು ಬೇರೇನೂ ಅಲ್ಲ, ನೀಲೇಶ್ವರ ಇಡಯಿಲಕ್ಕಾವ್ ಶ್ರೀನಾಗಾಲಯ ಸಮಿತಿ ನೇತೃತ್ವದಲ್ಲಿ ದಶಕಗಳಿಂದ ನಡೆದುಬರುತ್ತಿರುವ ಓಣಂ ಔತಣ ಕೂಟ ಭಾರೀ ಸಂಭ್ರಮದಿಂದ ನೆರವೇರಿತು. ಅಂದಹಾಗೆ ಇಲ್ಲಿ ಓಣಂ ಸಧ್ಯದ (ಔತಣ) ರುಚಿ ಉಣ್ಣುವವರು ಮನುಷ್ಯರಲ್ಲ!. ಸಾಕ್ಷಾತ್ ಕಪಿಗಳು!!.
ಹಬೆಯಾಡಿಸಿದ ಬಾಳೆ ಎಲೆಯಲ್ಲಿ ಉಪ್ಪು ಬೆರೆಸದ ಭಕ್ಷ್ಯಗಳನ್ನು, ಬೇಯಿಸದೆ, ನೆನೆಸಿದ ಅಕ್ಕಿ, ಬಟಾಣಿ, ಸೌತೆಕಾಯಿ, ಬಾಳೆಹಣ್ಣು, ಟೊಮ್ಯಾಟೊ ಮತ್ತು ಕ್ಯಾರೆಟ್ ಗಳನ್ನು ಸೇರಿಸಿದ ಓಣಂ ಸಧ್ಯ ಉಣಬಡಿಸಲಾಯಿತು. ಕೋವಿಡ್ ನಿಯಂತ್ರಣದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಹೆಚ್ಚು ಅವಕಾಶವಿರದೆ ಮಿತಿಗೊಳಪಟ್ಟ ಭಕ್ತ ಜನರ ಪಾಲ್ಗೊಳ್ಳುವಿಕೆಯೊಂದಿಗೆ ಈ ಕಪಿ ಭೋಜನ ನೆರವೇರಿತು.
ಪಪ್ಪಿ.....ಎಂದು ದೊಡ್ಡಸ್ವರದಲ್ಲಿ ಒಂದೆರಡು ಬಾರಿ ಕರೆದೊಡನೆ ದೊಡ್ಡ, ಸಣ್ಣ ಇಪ್ಪತ್ತಕ್ಕೂ ಹೆಚ್ಚು ಕೋತಿಗಳು ಮರಗಳ ಮೂಲಕ ಓಡಿ ಬಂದವು. ಅವುಗಳಲ್ಲಿ ಕೆಲವು ಪೇರಿಸಿಟ್ಟ ಟೇಬಲ್ ಗೆ ಇಳಿದು ಭಕ್ಷ್ಯಗಳನ್ನು ಸವಿಯುತ್ತಿರುವಂತೆ ಕೆಲವು ಕೋತಿಗಳು ಸಹಜ ಸ್ವಭಾವದಂತೆ ಒಂದರ ಮೇಲೊಂದರಂತೆ ಎರಗಿದವು. ಪುಟ್ಟ ಕೋತಿಗಳು ಬಳಿಕ ಹಿರಿಯ ಕೋತಿಗಳ ಆಜ್ಞೆಗನುಸಾರ ಕೆಳಗಿಳಿದು ಬಂದು ಆಹಾರ ಸೇವಿಸಿದವು. ವಿಶೇಷವೆಂಬಂತೆ ಈ ಬಾರಿ ಹೆಚ್ಚು ತುಂಟತನವನ್ನು ತೋರಿಸಿಲ್ಲ. ಕಾರಣ ಕೋವಿಡ್ ನ ಭೀಕರತೆ ಅವುಗಳಿಗೂ ಅರಿವಾಗಿರಬೇಕು!.
ನಾಗಬನದಲ್ಲಿ ಪ್ರತಿ ವರ್ಷವೂ ತಿರು ಓಣಂ ನಂದು ಕೋತಿಗಳಿಗೆ ಔತಣ ನೀಡುವ ಪರಿಪಾಠ ಬಹಳ ಹಿಂದಿನ ಸಂಪ್ರದಾಯ. ಕಳೆದ ಹಲವು ವರ್ಷಗಳಿಂದ ಕೋತಿಗಳಿಗೆ ನಿಶ್ಚಿತವಾದ ರೂಪದಲ್ಲಿ ಔತಣ ಸಿದ್ದಪಡಿಸುತ್ತಿದ್ದ ಚಾಲಿಲ್ ಮಾಣಿಕಂ ಅನಾರೋಗ್ಯಕ್ಕೆ ಒಳಗಾಗಿರುವುದರಿಂದ ಈ ಬಾರಿ ಕೋತಿಗಳಿಗೆ ಸರಿಯಾದ ಪ್ರಮಾಣದ ಆಹಾರವನ್ನು ಒದಗಿಸಲಾಗಿಲ್ಲ ಎಂದು ಸಂಬಂಧ ಪಟ್ಟವರು ಸಮರಸ ಸುದ್ದಿಗೆ ಮಾಹಿತಿ ನೀಡಿರುವರು.
ಇಲ್ಲಿಯ ವಾನರ ತಂಡ ಮನುಷ್ಯರೊಂದಿಗೆ ನಿಕಟತೆಯಿರುವ ವಿಶೇಷತೆ ಹೊಂದಿದೆ. ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯ ಪೀಡಿತರಾಗಿರುವ ಮಾಣಿಕಂ ರಿಗೆ ಕಳೆದ ಫೆಬ್ರವರಿಯಲ್ಲಿ ಅನಾರೋಗ್ಯ ಉಲ್ಬಣಿಸಿತು. ಕೋವಿಡ್ ಲಾಕ್‍ಡೌನ್ ಸಮಯದಲ್ಲಿ ಕೆಲವು ದಿನಗಳವರೆಗೆ ಸಾಕಷ್ಟು ಆಹಾರವನ್ನು ಪಡೆಯಲು ಅಸಾಧ್ಯವಾದ ಸಂದರ್ಭ ಶಾಸಕ ಎಂ ರಾಜಗೋಪಾಲನ್ ಮತ್ತು ಸ್ಥಳೀಯರು ಕೋತಿಗಳ ನೆರವಿಗೆ ಬಂದರು. ಮಾಣಿಕಂ ಅನಾರೋಗ್ಯಕ್ಕೆ ಒಳಗಾದಾಗ, ಶ್ರೀ ನಾಗಾಲಯಂ ಸಮಿತಿ ಸಭೆ ಸೇರಿ ಅವರ ಸ್ಥಾನಕ್ಕೆ ವ್ಯವಸ್ಥೆ ಮಾಡಿತು. ಸಮಿತಿ ಕಾರ್ಯದರ್ಶಿ ವಿ. ಬಾಲಕೃಷ್ಣನ್, ಎಂ. ಲಕ್ಷ್ಮಣನ್, ಪಿ. ಕುಞÂ್ಞ ಕೃಷ್ಣನ್, ಕೆ.ಸುಧಾಕರನ್ ಅವರು ಓಣಂ ಸಧ್ಯವನ್ನು ತಯಾರುಗೊಳಿಸಿ ಪರಂಪರೆಯನ್ನು ಎತ್ತಿಹಿಡಿದು ಕಾರುಣ್ಯದ ಮಾದರಿಯಾದರು.