ನವ ದೆಹಲಿ ; ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಾದ ಸಮಾನ ಶಾಲಾ ಶಿಕ್ಷಣ ನೀತಿ (ಎನ್‌ಇಪಿ)ಯಲ್ಲಿ ಸರ್ಕಾರವು ಕನಿಷ್ಠ ಹಸ್ತಕ್ಷೇಪವನ್ನು ಹೊಂದಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ) ಕುರಿತ ರಾಜ್ಯಪಾಲರ ಸಮ್ಮೇಳನದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡುತ್ತಾ ಹೇಳಿದ್ದಾರೆ. "ಶಿಕ್ಷಣ ನೀತಿ ಮತ್ತು ಶಿಕ್ಷಣ ವ್ಯವಸ್ಥೆ ದೇಶದ ಆಕಾಂಕ್ಷೆಗಳನ್ನು ಈಡೇರಿಸುವ ಪ್ರಮುಖ ಸಾಧನಗಳಾಗಿವೆ. ಕೇಂದ್ರ, ರಾಜ್ಯ ಸರ್ಕಾರ, ಸ್ಥಳೀಯ ಸಂಸ್ಥೆಗಳು ಇವೆಲ್ಲವೂ ಶಿಕ್ಷಣ ವ್ಯವಸ್ಥೆಯ ಜವಾಬ್ದಾರಿಯೊಂದಿಗೆ ಲಗತ್ತಿಸಲಾಗಿದೆ. ಆದರೆ ಈ ಮಹತ್ವಾಕಾಂಕ್ಷೆಯ ಶಿಕ್ಷಣ ನೀತಿಯಲ್ಲಿ ಸರ್ಕಾರಗಳ ಹಸ್ತಕ್ಷೇಪ ಕನಿಷ್ಠವಾಗಿರಬೇಕು" ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.
"ವಿದೇಶಾಂಗ ನೀತಿ, ರಕ್ಷಣಾ ನೀತಿಯು ದೇಶದದ್ದೇ ಹೊರತು ಸರ್ಕಾರದ್ದಲ್ಲ. ಅದೇ ರೀತಿ ಶಿಕ್ಷಣ ನೀತಿಯೂ ಎಲ್ಲರಿಗೂ ಸೇರಿದ್ದಾಗಬೇಕು. ಇಂತಹ ನೀತಿಯನ್ನು ಜಾರಿಗೆ ತರಲು ಜನ ಸಾಮೂಹಿಕ ಜವಾಬ್ದಾರಿಯನ್ನು ತೆಗೆದುಕೊಳ್ಳಬೇಕು" ಎಂದು ಮೋದಿ ಜನರನ್ನು ಒತ್ತಾಯಿಸಿದ್ದಾರೆ. ಹೊಸ ಶಿಕ್ಷಣ ನೀತಿಯ ವಿಶೇಷತೆಗಳ ಕುರಿತು ಮಾತನಾಡಿರುವ ಪ್ರಧಾನಿ ಮೋದಿ, "ಈ ಶಿಕ್ಷಣದ ಕ್ರಮದಿಂದಾಗಿ ವಿದ್ಯಾರ್ಥಿಗಳ ಮೇಲಿನ ಹೊರೆ ಮತ್ತು ಒತ್ತಡ ಕಡಿಮೆಯಾಗಲಿದೆ. ಇದು ಅಧ್ಯಯನಕ್ಕಿಂತ ಕಲಿಕೆಯ ಮೇಲೆ ಹೆಚ್ಚು ಕೇಂದ್ರೀಕರಿಸುತ್ತದೆ. ಉತ್ಸಾಹ, ಪ್ರಾಯೋಗಿಕತೆ ಮತ್ತು ಕಾರ್ಯಕ್ಷಮತೆ ಯ ಮೇಲೆ ವಿಶೇಷ ಗಮನವನ್ನು ಹೊಂದಿರುವ ಈ ಪಠ್ಯಕ್ರಮದಿಂದಾಗಿ ವಿದ್ಯಾರ್ಥಿಗಳಲ್ಲಿ ವಿಮರ್ಶಾತ್ಮಕ ಚಿಂತನೆ ಮೂಡುತ್ತದೆ.
ಈ ಹೊಸ ನೀತಿ ಮೆದುಳಿನ ಸಮಸ್ಯೆಗಳನ್ನು ನಿಭಾಯಿಸಲು ಸಹಾಯ ಮಾಡುತ್ತದೆ ಮತ್ತು 21 ನೇ ಶತಮಾನದಲ್ಲಿ ಭಾರತವು "ಜ್ಞಾನ ಆರ್ಥಿಕತೆ"ಯಾಗಲು ಸಹಕಾರಿಯಾಗಲಿದೆ. ಅಲ್ಲದೆ, ಸರಳ ಕುಟುಂಬದ ಯುವಕರೂ ಸಹ ಅಂತಾರಾಷ್ಟ್ರೀಯ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ಇದು ಸಹಕಾರಿಯಾಗಲಿದೆ" ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ದೇಶದ ರಾಷ್ಟ್ರಪತಿ ರಾಮನಾಥ ಕೋವಿಂದ್, ರಾಜ್ಯಗಳು ಮತ್ತು ಕೇಂದ್ರದ ಶಿಕ್ಷಣ ಸಚಿವರು ಹಾಗೂ ಎಲ್ಲಾ ವಿಶ್ವವಿದ್ಯಾಲಯಗಳ ಕುಪಕುಲಪತಿಗಳು ಮತ್ತು ರಾಜ್ಯಪಾಲರು ಭಾಗವಹಿಸಿದ್ದರು.
ಕಳೆದ ಜುಲೈನಲ್ಲಿ ಕೇಂದ್ರ ಸರ್ಕಾರ ತನ್ನ ನೂತನ ಶಿಕ್ಷಣ ನೀತಿಯನ್ನು ಕ್ಯಾಬಿನೆಟ್‌ನಲ್ಲಿ ಮಂಡಿಸಿ ಅನುಮೋದನೆ ಪಡೆದಿತ್ತು. ಈ ಮೂಲಕ 1986 ರಲ್ಲಿ ರೂಪಿಸಲಾದ 34 ವರ್ಷದ ಹಳೆಯ ಶಿಕ್ಷಣದ ರಾಷ್ಟ್ರೀಯ ನೀತಿಯನ್ನು ಬದಲಾಯಿಸಲು ಮುಂದಾಗಿತ್ತು. ಭಾರತ ದೇಶವನ್ನು ಜಾಗತಿಕ ಮಟ್ಟದಲ್ಲಿ ಜ್ಞಾನದ ಮಹಾಶಕ್ತಿಯನ್ನಾಗಿ ಮಾಡುವ ಮತ್ತು ಶಾಲಾ- ಉನ್ನತ ಶಿಕ್ಷಣ ವ್ಯವಸ್ಥೆಗಳಲ್ಲಿ ಪರಿವರ್ತನೆಯ ಸುಧಾರಣೆಗಳಿಗೆ ದಾರಿ ಮಾಡಿಕೊಡುವ ಸಲುವಾಗಿ ಈ ನೂತನ ಶಿಕ್ಷಣ ನೀತಿಯನ್ನು ಜಾರಿಗೆ ತರಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆಯೇ ಹೇಳಿತ್ತು.