ಬದಿಯಡ್ಕ: ತುಳು ಸಂಸ್ಕøತಿಯ ಪ್ರಧಾನ ಭೂಮಿಕೆಯಾದ ಕಾಸರಗೋಡಲ್ಲಿ ಇಂದು ತೌಳವ ಭಾಷೆ, ಸಾಂಸ್ಕøತಿಕ ನೆಲೆಗಟ್ಟಿಗೆ ಅಪಾಯಗಳಾಗುವ ವಿದ್ಯಮಾನಗಳು ಸಂಭವಿಸುತ್ತಿರುವುದು ಕಳವಳಕಾರಿಯಾದುದಾಗಿದೆ. ಇಲ್ಲಿಯ ತೌಳವ ಪರಂಪರೆಯ ಸ್ಥಳನಾಮಗಳು ಅನ್ಯ ಭಾಷೆಯ ಸೆಳೆತದಿಂದ ಬದಲಾಗುತ್ತಿರುವುದನ್ನು ಯಾವ ಬೆಲೆತೆತ್ತಾದರೂ ನಿಯಂತ್ರಿಸಿ ಮತ್ತೆ ಮೂಲವನ್ನು ಉಳಿಸುವ ಯತ್ನಗಳಾಗಬೇಕು ಎಂದು ಯುವ ಸಾಹಿತಿ, ಸಂಘಟಕ ಸುಂದರ ಬಾರಡ್ಕ ಅವರು ತಿಳಿಸಿದರು.
ತುಳುವೆರೆ ಆಯನೊ ಕೂಟ ಬದಿಯಡ್ಕ ನೇತೃತ್ವದಲ್ಲಿ ಬದಿಯಡ್ಕದ ಕ್ರಿಯೆಟಿವ್ ಕಾಲೇಜು ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ನೀರ್ ನೀರ್ ನಿರ್ನಾಲ್ ವಿಶೇಷ ಕಾರ್ಯಕ್ರಮದ ಭಾಗವಾಗಿ ದಿ.ಕವಿ ಕೃಷ್ಣ ಪೈ ಬದಿಯಡ್ಕ ಅವರ ನೆನಪುಗಳೊಂದಿಗೆ ಹಮ್ಮಿಕೊಂಡ ಬಹುಭಾಷಾ ಕವಿಗೋಷ್ಠಿಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವರ್ತಮಾನದ ಆಗುಹೋಗುಗಳ ದರ್ಪಣಗಳಂತೆ ಕವಿ ಕಾವ್ಯಗಳ ಮೂಲಕ ಕೆತ್ತುವ ಅಕ್ಷರ ಶಿಲ್ಪಗಳೇ ಕವಿತೆಗಳಾಗುತ್ತವೆ. ಒಡಲೊಳಗಿನ ಭಾವ ಸ್ಪುರಣತೆಗಳು ಒತ್ತಡ ರಹಿತವಾಗಿದ್ದಾಗ ಮಾತ್ರ ಸುಂದರ ಕಾವ್ಯಗಳ ಸೃಷ್ಟಿ ಸಾಧ್ಯ. ಇಂತಹ ಸಾಹಿತ್ಯ ಸಮಾಜವನ್ನು ಬಡಿದೆಬ್ಬಿಸಿ ಸತ್ಪಥದತ್ತ ಮುನ್ನಡೆಸುವ ಹಿರಿತನವನ್ನು ಹೊಂದಿರುತ್ತದೆ ಎಂದು ಅವರು ಈ ಸಂದರ್ಭ ಅಭಿಪ್ರಾಯ ವ್ಯಕ್ತಪಡಿಸಿದರು.
ಬಹುಭಾಷಾ ಕವಿಗೋಷ್ಠಿಯನ್ನು ಉದ್ಘಾಟಿಸಿದ ಹಿರಿಯ ಸಾಹಿತಿ ಕೆ.ಸಿ.ಪಾಟಾಳಿ ಪಡುಮಲೆ ಅವರು ಮಾತನಾಡಿ, ಭಾಷೆಗಳು ಜನರ ಪರಸ್ಪರ ಸಂವಹನ, ಅಭಿವ್ಯಕ್ತಿಗೆ ಸೇತುವಾಗಿದೆ. ಈ ಹಿನ್ನೆಲೆಯಲ್ಲಿ ಯಾವ ಭಾಷೆಗಳಲ್ಲೂ ಮೇಲು-ಕೀಳುಗಳೆಂಬ ತಾರತಮ್ಯ ಇರಬಾರದು. ಭಾಷಾ ಸಾಮರಸ್ಯವಿದ್ದರಷ್ಟೆ ಭಾಷೆ, ಜನ, ಜನಾಂಗ ಮತ್ತು ಸಂಸ್ಕøತಿಗಳಿಗೆ ನ್ಯಾಯದೊರಕಿಸಲು ಸಾಧ್ಯ ಎಂದು ತಿಳಿಸಿದರು.
ಸಂಘಟಕ, ತುಳುವೆರೆ ಆಯನೊ ಕೂಟದ ಸಂಸ್ಥಾಪಕ ಡಾ.ರಾಜೇಶ್ ಆಳ್ವ ಬದಿಯಡ್ಕ ಉಪಸ್ಥಿತರಿದ್ದು ಮಾತನಾಡಿ, ದಿ.ಕೃಷ್ಣ ಪೈ ಬದಿಯಡ್ಕ ಅವರು ಗಡಿನಾಡಿನ ಸಾಹಿತ್ಯ ವಲಯಕ್ಕೆ ನೀಡಿದ ಕೊಡುಗೆಗಳ ಬಗ್ಗೆ ಮಾಹಿತಿ ನೀಡಿ ಅವರಂತಹ ಪುಟಿದೇಳುವ ಸಾಹಿತ್ಯ ರಚನೆ, ಸಂಘಟನೆ ಇಂದಿನ ಸಂಕೀರ್ಣ ಪರಿಸ್ಥಿತಿಯಲ್ಲಿ ಮತ್ತೆ ಮೂಡಿಬರಬೇಕು ಎoದರು.
ತುಳುವೆರೆ ಆಯನೊ ಕೂಟದ ಕಾರ್ಯದರ್ಶಿ ಭಾಸ್ಕರ ಕೆ. ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮ ಸಂಯೋಜಕ ಗೋಪಾಲಕೃಷ್ಣ ಕುಲಾಲ್ ವಾಂತಿಚ್ಚಾಲ್ ಸ್ವಾಗತಿಸಿ, ಗೋಷ್ಠಿ ನಿರ್ವಹಿಸಿದರು. ಜಿಶನ್ ವಾಂತಿಚ್ಚಾಲ್ ಪ್ರಾರ್ಥನಾ ಗೀತೆ ಹಾಡಿದರು.
ಬಹುಭಾಷಾ ಕವಿಗೋಷ್ಠಿಯಲ್ಲಿ ನ್ಯಾಯವಾದಿ ಥೋಮಸ್ ಡಿ.ಸೋಜ(ಕೊಂಕಣಿ), ಲೀಲಾವತಿ ಟೀಚರ್(ತುಳು), ಶಂಕರ ಸ್ವಾಮಿಕೃಪಾ(ಮೊಗೇರ ತುಳು), ಬಾಲಕೃಷ್ಣ ಬೇರಿಕೆ(ಮರಾಠಿ), ಪ್ರಭಾವತಿ ಕೆದಿಲಾಯ(ಶಿವಳ್ಳಿ ತುಳು), ಮಮತಾ ಚುಳ್ಳಿಕ್ಕಾನ(ಹಿಂದಿ), ರಾಘವನ್ ಬೆಳ್ಳಿಪ್ಪಾಡಿ(ಮಲೆಯಾಳ), ಕಿಶೋರ್ ಸ್ವಾಮಿಕ್ರಪಾ(ಇಂಗ್ಲೀಷ್), ರಂಗ ಶರ್ಮ ಉಪ್ಪಂಗಳ(ಕರ್ಹಾಡ), ಪುರುಷೋತ್ತಮ ಭಟ್ ಕೆ(ಕನ್ನಡ) ಕವಿತೆಗಳನ್ನು ವಾಚಿಸಿದರು. ಕವಿತೆಗಳ ರಚನೆಗೆ ಸ್ಥಳದಲ್ಲೇ ವೈವಿಧ್ಯಮಯ ವಿಷಯಗಳನ್ನು ನೀಡಿದ್ದು ವಿಶೇಷತೆಯಾಗಿತ್ತು.