ಮಂಜೇಶ್ವರ: ಜುವೆಲ್ಲರಿ ವಂಚನೆ ನಡೆಸಿದ ಮಂಜೇಶ್ವರ ಶಾಸಕ ಎಂ.ಸಿ ಖಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿ ಎಲ್.ಡಿ.ಎಫ್ ಸೆಪ್ಟೆಂಬರ್ 16 ರಂದು ಜಿಲ್ಲೆಯ 20 ಕೇಂದ್ರಗಳಲ್ಲಿ ಜನಪರ ವಿಚಾರಣೆ ಧರಣಿ ಸಂಘಟಿಸುತ್ತಿದೆ. ಶಾಸಕ ಎಂ. ಸಿ. ಖಮರುದ್ದೀನ್ ಅಧ್ಯಕ್ಷನಾಗಿರುವ ಫ್ಯಾಶನ್ ಗೋಲ್ಡ್ ಸಂಸ್ಥೆ 150 ಕೋಟಿ ರೂಪಾಯಿ ನಿಕ್ಷೇಪ ವಂಚನೆ ನಡೆಸಿದ ಆರೋಪದ ದೂರು ಪ್ರಕಾರ ಜಿಲ್ಲೆಯ ವಿವಿಧ ಪೆÇಲೀಸ್ ಠಾಣೆಗಳಲ್ಲಿ 16 ಕೇಸುಗಳು ಶಾಸಕರ ಮೇಲೆ ದಾಖಲಾಗಿದೆ.
ಮುಸ್ಲಿಂ ಲೀಗ್ ನೇತಾರ ಹಾಗೂ ಶಾಸಕ ಸ್ಥಾನವನ್ನು ದುರುಪಯೋಗ ಮಾಡಿ ವಿವಿಧ ನಿಕ್ಷೇಪಕರಿಂದ ಹಣ ಸಂಗ್ರಹಿಸಿ ವಂಚನೆ ಮಾಡಿದ ಖಮರುದ್ದೀನ್ ಶಾಸಕ ಸ್ಥಾನದಲ್ಲಿ ಇನ್ನೂ ಮುಂದುವರಿಯುವುದು ಸರಿಯಲ್ಲ. ವಕ್ಫ್ ಭೂಮಿ ಕಾನೂನು ವಿರುದ್ಧವಾಗಿ ಮಾರಾಟ ಮಾಡಿದಕ್ಕೂ ಶಾಸಕರಿಗೆದುರಾಗಿ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಎಲ್.ಡಿ.ಎಫ್. ಆಗ್ರಹಿಸಿದೆ. ಈ ಎರಡು ವಂಚನೆ ಗಳನ್ನು ಸಮರ್ಥನೆ ಮಾಡುವ ಮುಸ್ಲಿಂ ಲೀಗ್ ನ ಮಾಫಿಯಾ ರಾಜಕೀಯವನ್ನು ಜನರು ಅರ್ಥಮಾಡಿಕೊಳ್ಳಬೇಕು. ಈ ವಿಷಯದಲ್ಲಿ ಯುಡಿಎಫ್ ಹಾಗೂ ಕಾಂಗ್ರೆಸ್ ಅಭಿಪ್ರಾಯ ಹೇಳಲು ತಯಾರಾಗಬೇಕು ಈ ವಿಷಯವನ್ನು ಎತ್ತಿಹಿಡಿದು ಆಂದೋಲನ ಸಂಘಟಿಸಲು ಮೊದಲನೇ ಹಂತದಲ್ಲಿ ಮಂಜೇಶ್ವರ ವಿಧಾನಸಭಾ ಕ್ಷೇತ್ರದ ಎಲ್ಲಾ ಪಂಚಾಯತ್ ಕೇಂದ್ರಗಳಲ್ಲಿ ಹಾಗೂ 4 ವಿಧಾನಸಭಾ ಕ್ಷೇತ್ರಗಳ ಪ್ರಧಾನ ಕೇಂದ್ರಗಳಲ್ಲಿ ಜನಪರ ಧರಣಿ ಯಶಸ್ವಿಗೊಳಿಸಬೇಕು ಎಂದು ಎಲ್.ಡಿ.ಎಫ್ ಕಾಸರಗೋಡು ಜಿಲ್ಲಾ ಸಮಿತಿ ವಿನಂತಿಸಿದೆ.