ಪೆರ್ಲ: ಕರೋನ ಮಹಾಮಾರಿಯ ನಡುವೆಯೂ ಕೇರಳದ ನಾಡಹಬ್ಬ ಓಣಂ ಆಚರಣೆ ಅಲ್ಲಲ್ಲಿ ನಡೆದಿದ್ದು, ತೆಂಕಣ ಭಾಗದಲ್ಲಿ ಕಂಡು ಬರುತ್ತಿದ್ದ ಮಾವೇಲಿ (ಮಹಾಬಲಿ ಚಕ್ರವರ್ತಿ) ಗಡಿನಾಡಿನಲ್ಲೂ ಕಾಣಿಸಿಕೊಂಡಿದ್ದು ಕೇರಳಿಯರ ಹಬ್ಬ ಆಚರಣೆಗೆ ಮೆರಗು ನೀಡುವುದರಲ್ಲಿ ಯಶಸ್ವಿಯಾಗಿದೆ.
ಎಣ್ಮಕಜೆ ಗ್ರಾಮ ಪಂಚಾಯತಿನ ಶೇಣಿ ಗ್ರಾಮದಲ್ಲಿ ಇದೇ ಮೊದಲ ಬಾರಿಗೆ "ಮಾವೇಲಿ" ಕಾಣಿಸಿಕೊಂಡಿದ್ದು ಜನತೆ ಓಣಂ ಸಂಭ್ರಮವನ್ನು ಕೊಂಡಾಡಿದ್ದಾರೆ.
ಶೇಣಿಯ ಲಕ್ಷಂಬೀಡಿನಲ್ಲಿ ಪರಿಸರವಾಸಿಗಳ ಸಹಯೋಗದೊಂದಿಗೆ ಇದೇ ಮೊತ್ತ ಮೊದಲ ಬಾರಿಗೆ ಓಣಂ ನಾಡ ಹಬ್ಬ ಆಚರಣೆ ನಾಂದಿಯಾಯಿತು. ಇದರ ಅಂಗವಾಗಿ ಮಕ್ಕಳಿಗೆ,ಮಹಿಳೆಯರಿಗೆ ಹಾಗೂ ಸಾರ್ವಜನಿಕರಿಗೆ ವಿವಿಧ ಸ್ಪರ್ಧೆಗಳು ಜರಗಿದವು.
ಯುವ ಧಾರ್ಮಿಕ ಮುಂದಾಳು ರಘರಾಮ ಬೋರ್ಕರ್ ಶೇಣಿ ಅವರ ನೇತೃತ್ವದಲ್ಲಿ ನಡೆದ ಓಣಂ ಆಚರಣೆಯ ಸಂಭ್ರಮಕ್ಕೆ ಸ್ವತಃ ಅವರೇ "ಮಾವೇಲಿ" ವೇಷಧಾರಿಯಾಗಿ ವಿಶೇಷ ಕಳೆ ಏರಿಸಿದರು. ಕೋವಿಡ್ 19 ಕಾಲಘಟ್ಟದಲ್ಲಿ ಬಂದ "ಮಾವೇಲಿ"ಯು ನೆರೆದ ಜನತೆಗೆ ಜಾಗೃತಿಯ ಸಂದೇಶ ಸಾರಿತು. ಬಳಿಕ ಕೋವಿಡ್ ಮಾನದಂಡಗಳನ್ನು ಪಾಲಿಸಿಕೊಂಡು ಲಘ ಮೆರವಣಿಗೆ ನಡೆಯಿತು. ಶೇಣಿಯಿಂದ ಮಣಿಯಂಪಾರೆ ದುರ್ಗಾನಗರದ ವರೆಗೆ ವಾಹನ ಮೂಲಕ ಸಂಚರಿಸಿದ "ಮಾವೇಲಿ"ಯನ್ನು ರಸ್ತೆಯ ಇಕ್ಕೆಲದಲ್ಲಿ ಅಂಗಡಿ ಮುಂಗಟ್ಟುಗಳಲ್ಲಿದ್ದವರು ಮೊದಲ ಬಾರಿಗೆ ಈ ಗ್ರಾಮದಲ್ಲಿ ಕಾಣಿಸಿಕೊಂಡ ಮಾವೇಲಿಯನ್ನು ಕಂಡು ಸಂಭ್ರಮಿಸಿದರು. ಶೇಣಿ ಲಕ್ಷಂಬೀಡಿನಲ್ಲಿ ಮನೆ ತೆರಳಿದ ಮಾವೇಲಿ ಓಣಂ ಶುಭಾಶಯ ಹಂಚಿತು.
ಓಣಂ ಅಂಗವಾಗಿ ನಡೆದ ವಿವಿಧ ಸ್ಪರ್ಧೆಗಳ ಬಹುಮಾನ ವಿತರಣೆಯನ್ನು ಪಕೀರ ಭಂಡಾರಿ ಶೇಣಿ ನಿರ್ವಹಿಸಿದರು. ಜಯಲಕ್ಷ್ಮಿ, ಶ್ರೀಲೇಖಾ ಜೆ.ಆಚಾರ್ಯ, ವಿಲ್ಮಾ ಡಿ.ಸೋಜ ಮೊದಲಾದವರು ವಿವಿಧ ಕಾರ್ಯಕ್ರಮಗಳ ನೇತೃತ್ವವಹಿಸಿದ್ದರು.ರಾಘವೇಂದ್ರ ನಾಯಕ್ ಶೇಣಿ ಸ್ವಾಗತಿಸಿ, ರವಿ ಎಸ್.ವಂದಿಸಿದರು.