ನವದೆಹಲಿ: ಬಿಜೆಪಿ ರಾಜ್ಯಸಭಾ ಸದಸ್ಯ ಸುಬ್ರಹ್ಮಣಿಯನ್ ಸ್ವಾಮಿ ಸ್ವಪಕ್ಷೀಯರನ್ನು ಟೀಕಿಸುವುದು ಹೊಸದೇನು ಅಲ್ಲ. ಆದರೆ ಈ ಬಾರಿ ಬಿಜೆಪಿ ಐಟಿ ಸೆಲ್ ವಿರುದ್ಧವೂ ಸುಬ್ರಹ್ಮಣಿಯನ್ ಸ್ವಾಮಿ ಕೆಂಡಾಮಂಡಲರಾಗಿದ್ದಾರೆ.
ಬಿಜೆಪಿ ಐಟಿ ಸೆಲ್ ಫಟಿಂಗರ ತಾಣವಾಗುತ್ತಿದೆ. ಐಟಿ ಸೆಲ್ ನ ಮುಖ್ಯಸ್ಥ ಅಮಿತ್ ಮಾಲ್ವಿಯಾ ನೇತೃತ್ವದ ಐಟಿ ಸೆಲ್ ನನ್ನ ತೇಜೋವಧೆ ಮಾಡುತ್ತಿದೆ. ನಕಲಿ ಐಡಿ ಮೂಲಕ ನನ್ನ ವಿರುದ್ಧ ವೈಯಕ್ತಿಕ ದಾಳಿ, ತೇಜೋವಧೆ ನಡೆಯುತ್ತಿದೆ.
ಫಟಿಂಗರ ತಾಣವಾಗಿರುವ ಬಿಜೆಪಿ ಐಟಿ ಸೆಲ್ ಮಾಡುವ ಕೆಲಸಗಳಿಗೆ ಹೇಗೆ ಬಿಜೆಪಿ ಹೊಣೆಯಾಗಿರುವುದಿಲ್ಲವೋ ಹಾಗೆಯೇ ನನ್ನ ವಿರುದ್ಧದ ವೈಯಕ್ತಿಕ ದಾಳಿಗಳಿಂದ ಕೆರಳಿ, ನನ್ನ ಬೆಂಬಲಿಗರು, ಅನುಯಾಯಿಗಳೂ ಸಹ ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕವಾಗಿ ಪ್ರತಿದಾಳಿಗೆ ಮುಂದಾದರೆ ಅದಕ್ಕೆ ನಾನು ಹೊಣೆಗಾರನಾಗಿರಲು ಸಾಧ್ಯವಿಲ್ಲ ಎಂದು ಸ್ವಾಮಿ ಸ್ಪಷ್ಟಪಡಿಸಿದ್ದಾರೆ.
ನಮ್ಮ ಪಕ್ಷ ಮರ್ಯಾದ ಪುರುಷೋತ್ತಮನ ಪಕ್ಷ, ರಾವಣ ಅಥವಾ ದುಶ್ಶಾಸನರ ಪಕ್ಷವಲ್ಲ, ತಮ್ಮ ವಿರುದ್ಧದ ದಾಳಿಗಳನ್ನು ತಾವು ನಿರ್ಲಕ್ಷಿಸಬಹುದು ಆದರೆ ಬಿಜೆಪಿ ಇಂಥಹವರನ್ನೆಲ್ಲಾ ಐಟಿ ಸೆಲ್ ನಿಂದ ಹೊರ ಹಾಕಬೇಕೆಂದು ಸ್ವಾಮಿ ಆಗ್ರಹಿಸಿದ್ದಾರೆ.