ನವದೆಹಲಿ: ಕೋವಿಡ್ -19 ಸಾಂಕ್ರಾಮಿಕ ಮತ್ತು ಭೀಕರ ಪ್ರವಾಹದ ಹಿನ್ನೆಲೆಯಲ್ಲಿ 2020ನೇ ಸಾಲಿನ ನಾಗರಿಕ ಸೇವೆಗಳ ಪರೀಕ್ಷೆ ಮುಂದೂಡಬೇಕೆಂದು ಕೋರಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಗುರುವಾರ ಕೇಂದ್ರ ಸರ್ಕಾರ ಮತ್ತು ಕೇಂದ್ರ ಲೋಕಸೇವಾ ಆಯೋಗ(ಯುಪಿಎಸ್ ಸಿ) ನೋಟಿಸ್ ನೀಡಿದೆ.
ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ಎ ಎಂ ಖನ್ವಿಲ್ಕರ್ ಮತ್ತು ಸಂಜೀವ್ ಖನ್ನಾ ಅವರ ಪೀಠ, ಈ ಸಂಬಂಧ ಪ್ರತಿಕ್ರಿಯೆ ಸಲ್ಲಿಸುವಂತೆ ಕೇಂದ್ರ ಸರ್ಕಾರ ಹಾಗೂ ಯುಪಿಎಸ್ ಸಿಗೆ ನೋಟಿಸ್ ನೀಡಿ, ವಿಚಾರಣೆಯನ್ನು ಸೆಪ್ಟೆಂಬರ್ 28ಕ್ಕೆ ಮುಂದೂಡಿದೆ.
ಅರ್ಜಿದಾರರು ನಾಗರಿಕ ಸೇವೆಗಳ ಪರೀಕ್ಷೆಯನ್ನು ಎರಡು ಅಥವಾ ಮೂರು ತಿಂಗಳು ಮುಂದೂಡಬೇಕೆಂದು ಕೋರಿದ್ದಾರೆ. ಪ್ರವಾಹ / ನಿರಂತರ ಮಳೆ ಮತ್ತು ಕೊರೋನಾ ಕಡಿಮೆಯಾದ ನಂತರ ಪರೀಕ್ಷೆ ನಡೆಸಬೇಕು ಎಂದು ಮನವಿ ಮಾಡಿದ್ದಾರೆ.
ಅಕ್ಟೋಬರ್ 4ಕ್ಕೆ ನಿಗದಿಯಾಗಿರುವ ನಾಗರಿಕ ಸೇವೆಗಳ ಪೂರ್ವಭಾವಿ ಪರೀಕ್ಷೆಯನ್ನು ಮುಂದೂಡಬೇಕು ಎಂದು ಯುಪಿಎಸ್ ಸಿಯ 20 ಆಕಾಂಕ್ಷಿಗಳು ವಕೀಲರ ಮೂಲಕ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದಾರೆ.