ತಿರುವನಂತಪುರ: ಲೈಫ್ ಮಿಷನ್ ಯೋಜನೆಯಲ್ಲಿನ ಅಕ್ರಮಗಳ ಬಗ್ಗೆ ತನಿಖೆ ನಡೆಸಲು ವಿಜಿಲೆನ್ಸ್ ತನಿಖೆಗೆ ಸರ್ಕಾರ ಆದೇಶಿಸಿದೆ. ಗೃಹ ಕಾರ್ಯದರ್ಶಿ ವಿಜಿಲೆನ್ಸ್ ನಿರ್ದೇಶಕರಿಗೆ ಪತ್ರ ನೀಡಿದ್ದಾರೆ ಎಂದು ವರದಿಯಾಗಿದೆ. ಅಕ್ರಮಗಳ ಬಗ್ಗೆ ಪ್ರಾಥಮಿಕ ತನಿಖೆ ನಡೆಸಲು ತೀರ್ಮಾನಿಸಲಾಯಿತು ಎನ್ನಲಾಗಿದೆ.
ಪ್ರವಾಹ ಪೀಡಿತರಿಗೆ ನಿರ್ಮಿಸುವ ವಸತಿಗಾಗಿ ಯುಎಇಯ ರೆಡ್ ಕ್ರೆಸೆಂಟ್ ಸಂಸ್ಥೆಗೆ ನೀಡಿದ 20 ಕೋಟಿ ರೂ.ಗಳಲ್ಲಿ 4.5 ಕೋಟಿ ರೂ.ಗಳನ್ನು ದುರುಪಯೋಗಪಡಿಸಿಕೊಂಡಿದೆ ಎಂದು ದೂರಲಾಗಿದ್ದು ಲೈಫ್ ಮಿಷನ್ ಯೋಜನೆಯಲ್ಲಿ ಆರೋಪಗಳ ಬಗ್ಗೆ ಸರ್ಕಾರ ತನಿಖೆಯನ್ನು ಘೋಷಿಸಿದ್ದು ಇದೇ ಮೊದಲು.
ಆದರೆ, ವಿಜಿಲೆನ್ಸ್ ತನಿಖೆಯನ್ನು ಒಪ್ಪುವುದಿಲ್ಲ ಎಂದು ಶಾಸಕ ಅನಿಲ್ ಅಕ್ಕರ ಹೇಳಿದ್ದಾರೆ. ಫಿರ್ಯಾದಿ ಮತ್ತು ಆರೋಪಿಗಳು ಒಬ್ಬರಾಗಿರುವ ಪ್ರಕರಣದಲ್ಲಿ ತನಿಖೆ ಪರಿಣಾಮಕಾರಿಯಾಗುವುದಿಲ್ಲ ಎಂಬುದು ಪ್ರತಿಪಕ್ಷದ ಶಾಸಕರ ಪ್ರತಿಕ್ರಿಯೆಯಾಗಿದೆ.
ಲೈಫ್ ಮಿಷನ್ ಯೋಜನೆಯಲ್ಲಿ ಉನ್ನತ ಮಟ್ಟದ ಆರೋಪದ ಬಗ್ಗೆ ತನಿಖೆ ನಡೆಸುವ ಸಾಧ್ಯತೆಯನ್ನು ಪರಿಶೀಲಿಸಬೇಕು ಎಂದು ಸಿಪಿಎಂ ಸೂಚಿಸಿದೆ ಎಂದು ಈ ಹಿಂದೆ ವರದಿಯಾಗಿತ್ತು. ಆದರೆ ತನಿಖೆಯನ್ನು ಘೋಷಿಸುವಲ್ಲಿ ಸರ್ಕಾರ ವಿಫಲವಾದದ್ದು ಟೀಕೆಗೆ ಗುರಿಯಾಗಿದೆ. ಇದರ ನಂತರ ವಿಜಿಲೆನ್ಸ್ ವಿಚಾರಣೆ ಘೋಷಿಸಲಾಗಿದೆ ಎಂಬ ವರದಿಗಳು ಬಂದಿವೆ.