ಕಾಸರಗೋಡು:ಶ್ರೀಮದ್ ಎಡನೀರು ಮಠಾಧೀಶ ಶ್ರೀಕೇಶವಾನಂದ ಭಾರತೀ ಶ್ರೀಪಾದಂಗಳು ಇಂದು ಮುಂಜಾನೆ ಇಹಲೋಕ ತ್ಯಜಿಸಿದರು. 79 ವರ್ಷ ವಯಸ್ಸಾಗಿತ್ತು.
ಕೇರಳದ ಏಕೈಕ ಶ್ರೀಶಂಕರ ಪೀಠಾಧಿಪತಿಗಳಾಗಿದ್ದ ಶ್ರೀಗಳು ತೋಟಕಾಚಾರ್ಯ ಪರಂಪರೆಯ ಯತಿ ಶ್ರೇಷ್ಠರಾಗಿ ಧಾರ್ಮಿಕ, ಸಾಂಸ್ಕøತಿಕ, ಸಾಮಾಜಿಕ ಕ್ಷೇತ್ರಗಳ ಪುನರುತ್ಥಾನದಲ್ಲಿ ವೈವಿಧ್ಯಪೂರ್ಣ ಕೊಡುಗೆಗಳ ಮೂಲಕ ಗಮನೀಯ ಸಾಧನೆ ಮೆರೆದಿದ್ದರು.
ಶ್ವಾಸಕೋಶ ಸಂಬಂಧಿ ಅನಾರೋಗ್ಯದಿಂದ ಕಳೆದ ಕೆಲವು ದಿನಗಳಿಂದ ಚಿಕಿತ್ಸೆಯಲ್ಲಿದ್ದರು. ಸುಧೀರ್ಘ ಕಾಲ ಚಾತುರ್ಮಾಸ್ಯ ವ್ರತಾನುಷ್ಠಾನಗೈದ ಬೆರಳೆಣಿಕೆಯ ಮಠಾಧಿಪತಿಗಳಲ್ಲಿ ಎಡನೀರು ಶ್ರೀಗಳೂ ಒಳಗೊಂಡಿದ್ದರೆಂಬುದು ವಿಶೇಷತೆಯಾಗಿದ್ದು ಸೆ.2 ರಂದಷ್ಟೇ ಪ್ರಸ್ತುತ ಸಾಲಿನ ತಮ್ಮ 60ನೇ ವರ್ಷದ ಚಾತುರ್ಮಾಸ್ಯ ವ್ರತಾಚರಣೆಯನ್ನು ಯಶಸ್ವಿಯಾಗಿ ಪೂರೈಸಿದ್ದರು.
ತಮ್ಮ 14ನೇ ವಯಸ್ಸಿನಲ್ಲಿ ಸನ್ಯಾಸ ಸ್ವೀಕರಿಸಿದ್ದ ಅವರು ತಮ್ಮ ಪೂರ್ವಾಶ್ರಮದ ತಮಧೆಯ ಸಹೋದರ ಶ್ರೀಈಶ್ವರಾನಂದ ಭಾರತೀ ಶ್ರೀಗಳಿಂದ ಸನ್ಯಾಸತ್ವ ಸ್ವೀಕರಿಸಿದ್ದರು.
ವಿಶೇಷವೆಂಬಂತೆ ಸಂವಿಧಾನದ ಮೂಲ ಆಶಯಗಳಿಗೆ ಸಂಬಂಧಿಸಿದ ಮಹತ್ತರ ಸಂವಿಧಾನ ನೂತನ ತಿದ್ದುಪಡಿಗೆ ಕಾರಣವಾದ1970ರ ಮಾ.21ರ ಶ್ರೀಕೇಶವಾಶನಂದ ಭಾರತೀ ಆಕ್ಟ್ ಜಾರಿಗೆ ಬರುವಲ್ಲಿ ಜಾಗತಿಕ ಮಟ್ಟದಲ್ಲೇ ಅಜರಾಮರರಾಗಿ ಶ್ರೀಗಳೆಂದೂ ನಮ್ಮೊಂದಿಗಿರುವರೆಂಬುದು ಅಳಿಸಲಾರದ ಕೊಡುಗೆಯಾಗಿದೆ.
ಶ್ರೀಕೇಶವಾನಂದರ ಬಹುಮುಖ ಪ್ರತಿಭೆ:
ಮಠಾಧೀಶರಾಗುವ ಮೊದಲು ಸ್ವಾಮಿ ತಮ್ಮ ಶಾಲಾ ದಿನಗಳಲ್ಲಿ ಯಕ್ಷಗಾನವನ್ನು ಕಲಿತಿದ್ದವರು. ಶ್ರೀಗಳು ಮಠಾಧೀಶರಾದ ಬಳಿಕ ಯಕ್ಷಗಾನ ಕ್ಷೇತ್ರಕ್ಕೆ ತಮ್ಮದೇ ಕೊಡುಗೆಗಳನ್ನು ನೀಡಿದ್ದಾರೆ. ಸ್ವತಃ ಭಾಗವತರಾಗಿ ಅನೇಕಾನೇಕ ಪ್ರಸಂಗಗಳನ್ನು ಸ್ವತಃ ನಿರ್ದೇಶಿಸುತ್ತಿದ್ದರು. ಕರ್ನಾಟಕ ಮತ್ತು ಹಿಂದೂಸ್ತಾನಿ ಸಂಗೀತ ಕಲಿತ ಸ್ವಾಮಿ ಸಂಗೀತ ಕಚೇರಿಗಳನ್ನು ನಡೆಸುತ್ತಿದ್ದರು. ಕನ್ನಡ, ತುಳು, ಮಲಯಾಳ, ಹಿಂದಿ, ಮರಾಠಿ ಮತ್ತು ಸಂಸ್ಕøತದಲ್ಲಿ ಭಕ್ತಿಗೀತೆಗಳನ್ನು ಹಾಡುತ್ತಿದ್ದರು. ಎಲ್ಲಾ ಭಕ್ತಿಗೀತೆಗಳನ್ನು ಅವರೇ ಸ್ವತಃ ಬರೆದು ಸಂಯೋಜಿಸಿರುವುದು ವಿಶೇಷತೆಯಾಗಿದೆ. ಮಲಯಾಳಂ ಮತ್ತು ಕನ್ನಡದಲ್ಲಿ ಭಕ್ತಿಗೀತೆಗಳ ಸಿಡಿ.ಗಳನ್ನೂ ಶ್ರೀಗಳು ಬಿಡುಗಡೆ ಮಾಡಿದ್ದಾರೆ. ಅವರು ಸ್ವತಃ ನಾಟಕಗಳನ್ನು ಬರೆದು ನಿರ್ದೇಶಿಸಿದ್ದಾರೆ.
ಎಡನೀರು ಮಠ:
ಚೆರ್ಕಳ-ಕಲ್ಲಡ್ಕ ರಾಜ್ಯ ಹೆದ್ದಾರಿಯ ಚೆರ್ಕಳದಿಂದ ಮೂರು ಕಿ.ಮೀ ದೂರದಲ್ಲಿ ಪ್ರಶಾಂತ ಸುಂದರ ಶ್ರೀಮಠವಿದೆ. ಆದಿ ಶಂಕರರ ಶಿಷ್ಯರಾದ ತೋಟಕಾಚಾರ್ಯರ ವಂಶಕ್ಕೆ ಸೇರಿದವರು. ತೊಟಕಾಚಾರ್ಯರು ತ್ರಿಶೂರ್ ನಿಂದ ಕಾಶಿಗೆ ಪ್ರಯಾಣವನ್ನು ಪ್ರಾರಂಭಿಸಿ ತ್ರಿಚಂಬರಂ ಮಠದಲ್ಲಿ ಉಳಿದುಕೊಂಡರು.ಮತ್ತು ಮರುದಿನ ಅವರು ಅಲ್ಲಿಂದ ಹೊರಟು ಎಡನೀರು ತಲುಪಿದಾಗ ಚಾತುರ್ಮಾಸ್ಯ ವ್ರತದ ಕಾಲವಾದ್ದರಿಂದ ಎಡನೀರು ಶ್ರೀ ವಿಷ್ಣುಮಂಗಲ ದೇವಸ್ಥಾನದಲ್ಲಿ ಉಳಿದು ವ್ರತಾನುಷ್ಠಾನಕ್ಕೆ ತೊಡಗಿಸಿ ಕೊಂಡರೆಂಬುದು ಪ್ರತೀತಿ. ಆ ಬಳಿಕ ಸ್ಥಳೀಯರು ಸ್ವಾಮಿಯನ್ನು ಕಾಶಿಗೆ ಹೋಗದಂತೆ ತಡೆಯಲು ಒತ್ತಾಯಿಸಿದ್ದರ ಪರಿಣಾಮ ತೋಟಕಾಚಾರ್ಯರು ವಟುವೊಬ್ಬನಿಗೆ ಸನ್ಯಾಸತ್ವ ಪ್ರಧಾನಿಸಿ ಯಾತ್ರೆ ಮುಂದುವರಿಸಿದರೆಂಬುದು ಹಿನ್ನೆಲೆ. ಬಳಿಕ ಎಡನೀರು ಮಠ ಅಸ್ತಿತ್ವಕ್ಕೆ ಬಂದಿತು.
ಪ್ರಸ್ತುತ ಎಡನೀರು ಮಠದ ಅಂಕೆಯಲ್ಲಿ ಶಾಲೆ, ಕಾಲೇಜು, ಕಲಾ ತಂಡಗಳು ಮತ್ತು ಗೋಶಾಲೆ, ಕೃಷಿ ತೋಟಗಳು ನಿರ್ವಹಿಸಲ್ಪಡುತ್ತಿವೆ. ಮಠದ ಬಾಗಿಲು ಯಾವಾಗಲೂ ಎಲ್ಲರಿಗೂ ತೆರೆದಿರುತ್ತದೆ. ರಾಜಕೀಯ, ಸಾಮಾಜಿಕ-ಸಾಂಸ್ಕೃತಿಕ ಕಲಾ ಕ್ಷೇತ್ರದಲ್ಲಿ ಅನೇಕ ಪ್ರಖ್ಯಾತ ವ್ಯಕ್ತಿಗಳು ಮಠಕ್ಕೆ ನಿಯಮಿತವಾಗಿ ಭೇಟಿ ನೀಡುತ್ತಾರೆ. 1973 ರವರೆಗೆ, ಜ್ಞಾನವನ್ನು ಬಯಸುವವರಿಗೆ ಮಠದ ಶಾಲೆಗಳಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತಿತ್ತು. ಗೋಪಾಲಕೃಷ್ಣ ಯಕ್ಷಗಾನ ಕಲಾಮಂಡಳಿ ತಂಡವು 30 ಕಲಾವಿದರನ್ನು ಒಳಗೊಂಡು ದಶಕಗಳಿಂದ ಮುನ್ನಡೆಸಿ ಎರಡು ವರ್ಷಗಳ ಹಿಂದೆಯಷ್ಟೇ ತಿರುಗಾಟದಿಂದ ಮುಕ್ತಗೊಳಿಸಿ ಶ್ರೀಮಠದ ಪ್ರದರ್ಶನಗಳಿಗೆ ಸೀಮಿತಗೊಳಿಸಲಾಗಿತ್ತು. ದಕ್ಷಿಣ ಕರ್ನಾಟಕ ಮತ್ತು ತುಳುನಾಡಿನಲ್ಲಿ ಜನಪ್ರಿಯವಾದ ಮಠ . ಗೋಕುಲ್ ಟ್ರಸ್ಟ್ ಅಡಿಯಲ್ಲಿ 20ಕ್ಕಿಂತಲೂ ಹೆಚ್ಚಿನ ಹಸುಗಳನ್ನು ಸಾಕಲಾಗುತ್ತಿದ್ದು, ಪ್ರತಿನಿತ್ಯ ಗೋಪೂಜೆಯ ಬಳಿಕವಷ್ಟೇ ದೈನಂದಿನ ಭಿಕ್ಷೆ ಸ್ವೀಕರಿಸುತ್ತಿದ್ದರೆಂಬುದು ಇನ್ನೊಂದು ವಿಶೇಷ.