ಪುಣೆ: ಬ್ರಿಟನ್ ನ ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗ ಸ್ಥಗಿತವಾದ ಬೆನ್ನಲ್ಲೇ ಭಾರತದ ಸೆರಮ್ ಇನ್ಸ್ ಟಿಟ್ಯೂಟ್ ನ ಕೋವಿಡ್ ಲಸಿಕೆ ಪ್ರಯೋಗಕ್ಕೂ ಕೂಡ ತಾತ್ಕಾಲಿಕ ಬ್ರೇಕ್ ಹಾಕಲಾಗಿದೆ.
ಬ್ರಿ ಟನ್ ನ ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗದ ವೇಳೆ ಸ್ವಯಂಸೇವಕರೊಬ್ಬರಿಗೆ ವಿಚಿತ್ರ ಕಾಯಿಲೆ ಕಂಡುಬಂದ ಹಿನ್ನಲೆಯಲ್ಲಿ ಲಸಿಕೆ ಪ್ರಯೋಗ ಸ್ಥಗಿತವಾಗಿತ್ತು. ಇದರ ಬೆನ್ನಲ್ಲೇ ಭಾರತದ ಡಿಸಿಜಿಐ (Drugs Controller General of India)ಭಾರತದಲ್ಲಿ ನಡೆಯುತ್ತಿರುವ ಕೊರೋನಾ ವೈರಸ್ ಲಸಿಕಾ ಪ್ರಯೋಗಕ್ಕೂ ಬ್ರೇಕ್ ಹಾಕುವಂತೆ ಸೂಚನೆ ನೀಡಿತ್ತು. ಅದರಂತೆ ಇದೀಗ ಪುಣೆ ಮೂಲದ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಸಂಸ್ಥೆ ತನ್ನ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ಬ್ರೇಕ್ ಹಾಕಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಸೆರಮ್ ಇನ್ಸ್ ಟಿಟ್ಯೂಟ್ ಆಡಳಿತ ಮಂಡಳಿ, ಬ್ರಿಟನ್ ನಲ್ಲಿ ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗ ಸ್ಥಗಿತವಾದ ಹಿನ್ನಲೆಯಲ್ಲಿ ಭಾರತದಲ್ಲಿ ಲಸಿಕೆ ಪ್ರಯೋಗಕ್ಕೆ ತಾತ್ಕಾಲಿಕ ತಡೆ ನೀಡಲಾಗಿದೆ. ಆಸ್ಟ್ರಾ ಜೆನಿಕಾ ಸಂಸ್ಥೆಯ ಲಸಿಕೆ ಪ್ರಯೋಗ ಪುನಾರಂಭವಾದ ಬಳಿಕ ಭಾರತದಲ್ಲಿ ಮತ್ತೆ ಲಸಿಕೆ ಪ್ರಯೋಗ ಮುಂದುವರೆಸುವ ಕುರಿತು ಚಿಂತನೆ ನಡೆಸಲಾಗುತ್ತದೆ ಎಂದು ಹೇಳಿದ್ದಾರೆ.
ನಿನ್ನೆಯಷ್ಟೇ ಬ್ರಿಟನ್ ನ ಪ್ರತಿಷ್ಠಿತ ಆಕ್ಸ್ಫರ್ಡ್ ವಿಶ್ವವಿದ್ಯಾಲಯದ ಜತೆ ಸೇರಿ ಕೊರೊನಾಗೆ ಔಷಧವನ್ನು ಅಭಿವೃದ್ಧಿಪಡಿಸುತ್ತಿರುವ ಅಸ್ಟ್ರಾ ಝೆನೆಕಾ ಸಂಸ್ಥೆಯು ತನ್ನ ಲಸಿಕಾ ಪ್ರಯೋಗವನ್ನು ಸ್ಥಗಿತ ಮಾಡಿದೆ. ಪರೀಕ್ಷೆ ವೇಳೆ ಒರ್ವ ಸ್ವಯಂ ಸೇವಕನಿಗೆ ನೀಡಿದ ಔಷಧದಿಂದ ಆತನಲ್ಲಿ ವಿವರಿಸಲಾಗದ ವಿಚಿತ್ರ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ ಈ ಪರೀಕ್ಷೆಗೆ ಸಂಸ್ಥೆ ವಿರಾಮ ನೀಡಿದೆ.