ಮಂಜೇಶ್ವರ: ವರ್ಕಾಡಿ ಗ್ರಾಮ ಪಂಚಾಯತಿಯ 11ನೇ ವಾರ್ಡಿನ ಉದ್ಯೋಗ ಖಾತರಿ ಯೋಜನೆಯಲ್ಲಿ ಲಕ್ಷಾಂತರ ರೂ.ಗಳ ಅವ್ಯವಹಾರ ನಡೆದಿರುವುದನ್ನು ಪ್ರತಿಭಟಿಸಿ ಬಿಜೆಪಿ ರಂಗಕ್ಕಿಳಿದಿದೆ. ಇಲ್ಲಿನ ಕೊಣಿಬೈಲು ವಾರ್ಡಿನ ಮುಗುಳಿ - ಸೊಡಂಕೂರು ರಸ್ತೆಯ ಉದ್ಯೋಗ ಖಾತರಿ ಯೋಜನೆಯಲ್ಲಿ ಮಂಜೂರಾದ ಕಾಂಕ್ರೀಟ್ ರಸ್ತೆಯ ಮುಂಗಡ ಹಣವು ಏ.16-ಏ. 22 ಎಂಬ ಎರಡು ತಾರೀಕಿನಲ್ಲಿ ಒಟ್ಟು ಮೊತ್ತ 96,720.00 ಪಡೆದಿರುತ್ತಾರೆ. ರಸ್ತೆಯ ಕಾಮಗಾರಿಗೆ ಮಂಜೂರಾದ ಒಟ್ಟು ಮೊತ್ತ -4,92000.00 ಆಗಿದೆ. ಏಪ್ರಿಲ್ ತಿಂಗಳಲ್ಲಿ ಸುಮಾರು 1 ಲಕ್ಷದ ವರೆಗೆ ಹಣ ಮುಂಗಡ ಪಡೆದಿದ್ದರೂ ಕಾಮಗಾರಿ ಪ್ರಾರಂಭ ಆಗಿರಲಿಲ್ಲ. ಈ ಮಾಹಿತಿ ಪಂಚಾಯತಿ ಸದಸ್ಯ ಗೋಪಾಲ (ಪಕ್ಷೇತರ ಅಭ್ಯರ್ಥಿ )ಅವರು ಮತ್ತು ಬಿಜೆಪಿ ಜನಪ್ರತಿನಿಧಿಗಳ ಗಮನಕ್ಕೆ ಬಂದು ದೂರು ಸಲ್ಲಿಸಿದ್ದರು. ಪಿಡಿಒ ಬಂದು ಪರಿಶೋಧಿಸಿದಾಗ ಕಾಮಗಾರಿ ಪ್ರಾರಂಭ ಮಾಡದೇ ಬಿಲ್ ಬರೆದು ಹಣ ದುರುಪಯೋಗ ಮಾಡುವ ತಯಾರಿ ನಡೆದಿತ್ತು. ಈ ಬಿಲ್ ಗಳಿಗೆ ಪಂಚಾಯತಿ ಅಧ್ಯಕ್ಷರು ಡಿಜಿಟಲ್ ಸಹಿ ಹಾಕಿದ್ದು ಇದನ್ನು ತನಿಖೆ ನಡೆಸಬೇಕೆಂದು ಬಿಜೆಪಿ ಆಗ್ರಹಿಸಿದೆ. ಪ್ರಸ್ತುತ ಪಂಚಾಯತಿ ಅಧ್ಯಕ್ಷರು ಮತ್ತು ಸದಸ್ಯೆ ಪಂಚಾಯತಿ ಇಲಾಖೆಯವರೊಂದಿಗೆ ಶಾಮೀಲಾಗಿ ಹಣ ದುರುಪಯೋಗಪಡಿಸಿರುವುದಾಗಿ ಆರೋಪಿಸಿದ್ದು ಈ ಕುರಿತು ಸಮಗ್ರ ತನಿಖೆ ಮಾಡಬೇಕೆಂದು ಆಗ್ರಹಿಸಿ ಬಿಜೆಪಿ ವರ್ಕಾಡಿ ಪಂಚಾಯತಿ ಸಮಿತಿಯ ನೇತೃತ್ವದಲ್ಲಿ ಗುರುವಾರ ಬೃಹತ್ ಪ್ರತಿಭಟನಾ ಮಾರ್ಚ್ ನಡೆಯಿತು.
ಬಿಜೆಪಿ ಪಂ.ಸಮಿತಿ ಅಧ್ಯಕ್ಷ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆಯಲ್ಲಿ ಬಿಜೆಪಿ ಜಿಲ್ಲಾ ಅಧ್ಯಕ್ಷ ನ್ಯಾಯವಾದಿ ಕೆ.ಶ್ರೀಕಾಂತ್ ಉದ್ಘಾಟಿಸಿದರು. ಮಂಡಲ ಅಧ್ಯಕ್ಷ ಮಣಿಕಂಠ ರೈ ಪಟ್ಲ, ಒಬಿಸಿ ಮೋರ್ಚಾ ರಾಜ್ಯ ಕೋಶಾಧಿಕಾರಿ ನ್ಯಾಯವಾದಿ ನವೀನ್ ರಾಜ್ ಕೆ.ಜೆ, ಮಂಜೇಶ್ವರ ಬ್ಲಾಕ್ ಪಂ.ಸದಸ್ಯ ಸದಾಶಿವ ಯು, ವರ್ಕಾಡಿ ಗ್ರಾ.ಪಂ.ಸದಸ್ಯ ವಸಂತ ಎಸ್, ಆನಂದ ತಚ್ಚಿರೆ, ಸದಾಶಿವ ನಾಯ್ಕ್ ಮಂಟಮೆ, ಹಿರಿಯ ಬಿಜೆಪಿ ನೇತಾರ ದೂಮಪ್ಪ ಶೆಟ್ಟಿ ತಾಮರು,ಬಿಜೆಪಿ ಜಿಲ್ಲಾ ಸಮಿತಿಯ ಯಾದವ ಬಡಾಜೆ,ಸುಧಾಮ ಗೋಸಾಡ, ಯುವಮೋರ್ಚಾ ಮಂಡಲ ಉಪಾಧ್ಯಕ್ಷ ಪ್ರಜಿತ್ ಶೆಟ್ಟಿ, ಕರ್ಷಕ ಮೋರ್ಚಾ ಉಪಾಧ್ಯಕ್ಷ ಮೋಹನ್ ಶಂಕರ್ ನಾಯಕ್, ಎಸ್.ಸಿ.ಮೋರ್ಚಾ ಅಧ್ಯಕ್ಷ ಮಾಧವ, ಒಬಿಸಿ ಮೋರ್ಚಾದ ರವಿ ಮುಡಿಮಾರ್, ಮಂಡಲ ಕಾರ್ಯದರ್ಶಿ ರಾಜೇಶ್ ಮುಟ್ಲ, ಪದ್ಮನಾಭ ಮಂಜೇಶ್ವರ ಮಂಡಲ ಕಾರ್ಯದರ್ಶಿ ಆದರ್ಶ್ ಬಿ.ಎಂ, ಯುವಮೋರ್ಚಾ ನೇತಾರ ಅವಿನಾಶ್ ಹೆಗ್ಡೆ ಮಂಜೇಶ್ವರ ಮೊದಲಾದವರು ಉಪಸ್ಥಿತರಿದ್ದರು. ಸಭೆಗಿಂತ ಮೊದಲು ಮಜೀರ್ಪಳ್ಳ ಜಂಕ್ಷನ್ ನಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆಗೆ ನಾರಾಯಣ ತುಂಗಾ, ರಾಘವೇಂದ್ರ ಮಯ್ಯ ದೈಗೋಳಿ, ಲಂಬೋದರ, ಉದಯ ಸುಳ್ಯಮೆ,ಅವಿನಾಶ್ ಹೆಗ್ಡೆ, ಕೀರ್ತೇಶ್ ಮುಗುಳಿ, ಪ್ರಮೋದ್ ಕುಮಾರ್ ಕಾಪಿರಿ, ಯತೀರಾಜ್, ಹರೀಶ್ ನಾಯ್ಕ್ ಮಳಿ ಮೊದಲಾದವರು ನೇತೃತ್ವ ನೀಡಿದರು. ಜಗದೀಶ್ ಚೇಂಡೆಲ್ ಸ್ವಾಗತಿಸಿ, ರಕ್ಷಣ್ ಅಡಕಳಕಟ್ಟೆ ವಂದಿಸಿದರು.