ಮಂಜೇಶ್ವರ: ಸಿಪಿಎಂ,ಸಿಪಿಐ ಪಕ್ಷಗಳಿಗೆ ನೈತಿಕತೆ ಇದ್ದರೆ ಪೈವಳಿಕೆ, ಎಣ್ಮಕಜೆ ಪಂಚಾಯತ್ ಗಳಲ್ಲಿ ಮುಸ್ಲಿಂ ಲೀಗ್ ಗೆ ನೀಡಿರುವ ಬೆಂಬಲ ಹಿಂಪಡೆದು ಮಂಜೇಶ್ವರ ಶಾಸಕರ ವಿರುದ್ದ ಪ್ರತಿಭಟನೆ ಮಾಡಲಿ. ಈ ಎರಡು ಪಂಚಾಯತ್ ಗಳಲ್ಲಿ ಪರಸ್ಪರ ಒಳ ಒಪ್ಪಂದ ಮಾಡಿ ಅಧಿಕಾರ ನಡೆಸುವ ಎಡರಂಗ ಹಾಗೂ ಐಕ್ಯರಂಗದ ರಾಜಕೀಯ ದಿವಾಳಿತನವು ಮತದಾರರಿಗೆ ಮಾಡುವ ಅವಮಾನ. ವಂಚನೆ ಪ್ರಕರಣದ ಆರೋಪಿ ನೂರಾರು ಕೋಟಿ ರೂ.ಗಳ ವಂಚಕ ಮಂಜೇಶ್ವರ ಶಾಸಕ ಎಂ,ಸಿ ಕಮರುದ್ದೀನ್ ವಿರುದ್ಧ ಪ್ರತಿಭಟಿಸಲು ಇಲ್ಲಿನ ಸಿಪಿಎಂ, ಹಾಗೂ ಸಿಪಿಐ ಪಕ್ಷ ಗಳಿಗೆ ನೈತಿಕತೆ ಇಲ್ಲ ಎಂದು ಬಿಜೆಪಿ ಮಂಜೇಶ್ವರ ಮಂಡಲ ಸಮಿತಿ ಪ್ರ. ಕಾರ್ಯದರ್ಶಿ ಆದರ್ಶ್ ಬಿಎಂ ಅಗ್ರಹಿಸಿದ್ದಾರೆ.
ಈ ಒಪ್ಪಂದಗಳ ಭಾಗವೇ ಶಾಸಕರ ಬಂಧನವನ್ನು ತಡೆಯುತ್ತಿದೆ. ಅಧಿಕಾರದಲ್ಲಿದ್ದು ತನಿಖೆಯ ಮೇಲೆ ಪ್ರಭಾವ ಬೀರಿ ತನಿಖೆಯನ್ನು ಮುಚ್ಚಿ ಹಾಕಲು ಪಿಣರಾಯಿ ಯ ಗೃಹಖಾತೆ ಪ್ರಯತ್ನ ಮಾಡುತ್ತಿದೆ ಎಂದು ಆದರ್ಶ್ ಆರೋಪಿಸಿದರು.
ಮುಸ್ಲಿಂ ಲೀಗ್ ಮತ್ತು ಸಿಪಿಎಂ ಒಂದೇ ನಾಣ್ಯದ ಎರಡು ಮುಖಗಳು. ಅಧಿಕಾರದ ಮದದಲ್ಲಿ ಸರ್ಕಾರ ಹಾಗೂ ಮಂತ್ರಿಗಳ ಪುತ್ರರು ಚಿನ್ನ ಸಾಗಾಟ, ಗಾಂಜಾ ಸಾಗಾಟ, ಮಾಫಿಯಾ ದಂದೆ ಮಾಡುತ್ತಿದ್ದಾರೆ. ಲೀಗ್ ನ ಶಾಸಕರು ಮುಖ್ಯಮಂತ್ರಿಯ ವಂಚನೆಗಳಿಗೆ ಪ್ರೇರಣೆಯಾಗಿ ಸ್ಥಳೀಯವಾಗಿ ಚಿನ್ನ ಸಾಗಾಟ, ಹಣ ಸಂಗ್ರಹ, ಹವಳ ದಂಧೆಗಳಲ್ಲಿ ವ್ಯಸ್ತವಾಗಿದೆ. ಇದು ಕೇರಳಕ್ಕೆ ಅವಮಾನಕಾರಿ. ಇದರ ವಿರುದ್ಧ ಬಿಜೆಪಿ ಶಕ್ತವಾಗಿ ಹೋರಾಟ ಮಾಡಲಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.