ಕಾಸರಗೋಡು: ಕನ್ನಡತಿ ಡಿ.ಆರ್.ಮೇಘಶ್ರೀ ಅವರು ಕಾಸರಗೋಡು ಜಿಲ್ಲಾ ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಮೇಘಶ್ರೀ, ಈ ಹಿಂದೆ ಕೋಯಿಕ್ಕೋಡ್ ಜಿಲ್ಲೆಯಲ್ಲಿ ಸಹಾಯಕ ಜಿಲ್ಲಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದರು. ಕಾಸರಗೋಡು ಅಪರ ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಮೇಘಶ್ರೀ ಅವರು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟಿದ್ದಾರೆ.
'ಎಳವೆಯಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂದಿನ ರಸ್ತೆಯಲ್ಲಿ ಶಾಲೆಗೆ ತೆರಳುತ್ತಿದ್ದೆ. ಈ ಅವಧಿಯಲ್ಲಿ ಅನೇಕ ಬೇಡಿಕೆಗಳೊಂದಿಗೆ ಮನವಿ ಹಿಡಿದುಕೊಂಡು ಜನಸಾಮಾನ್ಯರು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಲು ಕಾಯುತ್ತಿದ್ದರು. ಸಾಮಾನ್ಯ ಜನರ ಬದುಕಿಗೆ ಅಗತ್ಯದ ಸೌಲಭ್ಯ ಒದಗಿಸುವಲ್ಲಿ ಜಿಲ್ಲಾಧಿಕಾರಿಯಂತಹ ಒಬ್ಬ ಸರ್ಕಾರಿ ಅಧಿಕಾರಿಯಾಗುವುದು ಸೂಕ್ತ ಎಂದು ಅಂದೇ ಮನವರಿಕೆಯಾಗಿತ್ತು. ಈ ಅರಿವಿನ ಬೆಳಕಿನಲ್ಲಿ ಸಿವಿಲ್ ಸರ್ವೀಸ್ ರಂಗಕ್ಕಿಳಿದಿದ್ದೆ'ಎಂದಿದ್ದಾರೆ.
ತನಗೆ ಗಡಿನಾಡು ಕಾಸರಗೋಡು ಜಿಲ್ಲೆಯ ಬಗ್ಗೆ ಹೆಮ್ಮೆಯಿದೆ. ಅಲ್ಲದೆ ಕಾಸರಗೋಡು ಜಿಲ್ಲೆ ಪ್ರವಾಸೋದ್ಯಮ ಕ್ಷೇತ್ರದಲ್ಲಿ ಅಪಾರ ಸಾಧ್ಯತೆ ಹೊಂದಿದ್ದು, ಅದನ್ನು ಸಮರ್ಪಕವಾಗಿ, ಗರಿಷ್ಠ ಮಟ್ಟದಲ್ಲಿ ಬಳಸಿಕೊಳ್ಳಬೇಕಾಗಿದೆ. ಕೋವಿಡ್ ಭೀತಿ ಪೂರ್ಣರೂಪದಲ್ಲಿ ತೊಲಗಿದ ನಂತರ ಈ ಬಗ್ಗೆ ನಾವು ಗಂಭೀರವಾಗಿ ಚಿಂತಿಸಬಹುದಾಗಿದೆ ಎಂದು ಮೇಘಶ್ರೀ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಎಸ್ ಬಿ ಐ ಯಲ್ಲಿ ಪ್ರಧಾನ ಪ್ರಬಂಧಕರಾಗಿದ್ದ ತಮ್ಮ ತಂದೆ ರುದ್ರಮುನಿಯವರು ತಮ್ಮ ಬದುಕಿಗೆ ರೋಲ್ ಮಾಡೆಲ್ ಎಂದಿರುವ ಮೇಘಶ್ರೀ, ಐಎಎಸ್ ಪಡೆಯಲು ಪ್ರಧಾನ ಕಾರಣರೂ ಅವರೇ ಆಗಿದ್ದಾರೆ ಎಂದವರು ಅಭಿಮಾನದಿಂದ ಹೇಳುತ್ತಾರೆ.
ಕಂಪ್ಯೂಟರ್ ಸಯನ್ಸ್‍ನಲ್ಲಿ ಇಂಜಿನಿಯರಿಂಗ್ ಪದವೀಧರರಾಗಿರುವ ಮೇಘಶ್ರೀ ಅವರಿಗೆ ಸಿವಿಲ್ ಸರ್ವೀಸ್ ಲಭಿಸಿದ ನಂತರ ಮೊದಲ ನೇಮಕಾತಿ ಇದಾಗಿದೆ. ಮೇಘಶ್ರೀ ಅವರ ಪತಿ ಡಾ.ವಿಕ್ರಂ ಸಿಂಹ ಅವರು ಕರ್ನಾಟಕ ಕೃಷಿ ವಿವಿಯ ಸಹಾಯಕ ಪ್ರಾಚಾರ್ಯರಾಗಿದ್ದಾರೆ. ಕಾಸರಗೋಡು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿರುವ ಶಿಲ್ಪಾ ಅವರೂ ಕನ್ನಡತಿಯಾಗಿದ್ದಾರೆ.