ನವದೆಹಲಿ: ಸರಕು ಮತ್ತು ಸೇವಾ ತೆರಿಗೆ(ಜಿಎಸ್ ಟಿ) ಪರಿಹಾರವನ್ನು ನೀಡದಿರುವ ವಿಚಾರದಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪರಸ್ಪರ ಆರೋಪ, ಪ್ರತ್ಯಾರೋಪಗಳಲ್ಲಿ ತೊಡಗಿಸಿಕೊಂಡಿರುವಾಗ, ಕೇಂದ್ರ ಸರ್ಕಾರ ಆಂತರಿಕ ಸರಕು ಮತ್ತು ಸೇವಾ ತೆರಿಗೆ(ಐಜಿಎಸ್ ಟಿ)ಯನ್ನು ತಪ್ಪಾಗಿ ಲೆಕ್ಕಹಾಕಿದೆ ಎಂದು ಕಂಟ್ರೋಲರ್ ಅಂಡ್ ಆಡಿಟರ್ ಜನರಲ್ ಆಫ್ ಇಂಡಿಯಾ(ಸಿಎಜಿ) ಹೇಳಿದೆ. ಇದರಿಂದ ರಾಜ್ಯಗಳಿಗೆ ತಮ್ಮ ಪಾಲಿನ ಜಿಎಸ್ ಟಿ ಬಹಳ ಕಡಿಮೆ ಸಿಗುತ್ತಿದೆ ಎಂದು ಸಿಎಜಿ ವರದಿ ಹೇಳಿದೆ.
2018-19ರಲ್ಲಿ ಒಟ್ಟು 15 ಸಾವಿರದ 001 ಕೋಟಿ ರೂಪಾಯಿಗಳನ್ನು ಕೇಂದ್ರ ಸರ್ಕಾರ ರಾಜ್ಯಗಳ ಐಜಿಎಸ್ ಟಿ ಪಾಲು ಎಂದು ವರ್ಗಾಯಿಸಿತು, ಆದರೆ ರಾಜ್ಯ ಮತ್ತು ಕೇಂದ್ರಗಳ ಮಧ್ಯೆ ಸರಿಯಾಗಿ ಜಿಎಸ್ ಟಿ ಲೆಕ್ಕಾಚಾರ ಹಾಕಿರಲಿಲ್ಲ ಎಂದು ಹೇಳುತ್ತದೆ.ಕಳೆದ ವಾರ ಮುಂಗಾರು ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಸದನದ ಮುಂದಿಟ್ಟಿರುವ ಸಿಎಜಿ ವರದಿಯಿಂದ ಇದು ತಿಳಿದುಬಂದಿದೆ.
ಜಿಎಸ್ ಟಿ ನಿಯಮ ಪ್ರಕಾರ, 15 ಸಾವಿರ ಕೋಟಿ ರೂಪಾಯಿ ಕೇಂದ್ರ ಮತ್ತು ರಾಜ್ಯಗಳ ಮಧ್ಯೆ ವಿಭಜನೆ ಮಾಡಬೇಕಾಗಿತ್ತು. ಕಳೆದ ವರ್ಷ ಐಜಿಎಸ್ ಟಿ ಸರಿಯಾಗಿ ಹಂಚಿಕೆಯಾಗಿರಲಿಲ್ಲ, ಅಲ್ಲದೆ, ಉಳಿಕೆ 13 ಸಾವಿರದ 944 ಕೋಟಿ ರೂಪಾಯಿ ಐಜಿಎಸ್ಟಿಯ ತಾತ್ಕಾಲಿಕ ಹಂಚಿಕೆಗೆ ಅವಕಾಶ ನೀಡಿದ್ದರೂ ಸಹ, ಅದನ್ನು ಸರಿಯಾಗಿ ವಿಂಗಡಿಸಲಾಗಿಲ್ಲ ಮತ್ತು ಸಿಎಫ್ಐ (ಕನ್ಸಾಲಿಡೇಟೆಡ್ ಫಂಡ್ ಆಫ್ ಇಂಡಿಯಾ) ನಲ್ಲಿ ಉಳಿಸಿಕೊಳ್ಳಲಾಗಿದೆ, ಹೀಗಾಗಿ ರಾಜ್ಯಗಳಿಗೆ ಕಡಿಮೆ ಹಣ ದೊರಕಿದೆ ಎಂದು ವರದಿ ಹೇಳಿದೆ.
ಕೇಂದ್ರ ಸರ್ಕಾರ ರಾಜ್ಯಗಳಿಗೆ ಕಳೆದ 5 ತಿಂಗಳಿನಿಂದ ಜಿಎಸ್ ಟಿ ಪರಿಹಾರವನ್ನೇ ನೀಡಿಲ್ಲ. ಮುಂದಿನ ತಿಂಗಳು ಅಕ್ಟೋಬರ್ 4ರಂದು ನಡೆಯುವ ಜಿಎಸ್ ಟಿ ಮಂಡಳಿ ಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಲಿದೆ.