ಕಾಸರಗೋಡು: ಕಾಞಂಗಾಡ್ ಸರಕಾರಿ ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಪೈನ್ ಆಂಡ್ ಪಾಲಿಯೇಟಿವ್ ಕೇರ್ ಯೂನಿಟ್ ಗೆ ಮಂಜೂರು ಮಾಡಲಾದ ವಾಹನಕ್ಕೆ ಚಾಲನೆ ಲಭಿಸಿದೆ.
ಶುಕ್ರವಾರ ಈ ಸಂಬಂಧ ನಡೆದ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಹಸುರು ನಿಶಾನೆ ತೋರಿದರು. ಈ ವೇಳೆ ಮಾತನಾಡಿದ ಸಚಿವ ಈ ವಿಭಾಗದಲ್ಲಿ ಕರ್ತವ್ಯದಲ್ಲಿರುವ ಸಿಬ್ಬಂದಿಯ ಸೇವೆ ಶ್ಲಾಘನೀಯ. ರೋಗಿಗಳನ್ನು ಅವರ ಕುಟುಂಬದ ಮಂದಿ ಶುಶ್ರೂಷೆ ಮಾಡುವಲ್ಲಿ ಹಿಂದೇಟು ಹಾಕಿದ ಕೆಲವು ಪ್ರಕರಣಗಳಲ್ಲೂ ಈ ವಿಭಾಗದ ಸಿಬ್ಬಂದಿ ನಡೆಸಿದ ಸೇವೆಗಳು ನಾಡಿಗೆ ಮಾದರಿ. ಇದು ಮಾನವ ಸೇವೆಯ ಪ್ರತೀಕ. ಇಂಥಾ ವಲಯಕ್ಕೆ ನಿಧಿ ಮೀಸಲಿರಿಸಲು ರಾಕ್ಯ ಸರಕಾರ ಆದ್ಯತೆ ನೀಡುತ್ತಾ ಬಂದಿದೆ ಎಂದರು.
ಸರಕಾರಿ ಜಿಲ್ಲಾ ಹೋಮಿಯೋ ಆಸ್ಪತ್ರೆ ಆವರಣದಲ್ಲಿ ಕೋವಿಡ್ ಕಟ್ಟುನಿಟ್ಟುಗಳನ್ನು ಪಾಲಿಸಿ ಸಮಾರಂಭ ನಡೆದಿತ್ತು. ಕಾಞಂಗಾಡ್ ನಗರಸಭೆ ಅಧ್ಯಕ್ಷ ವಿ.ವಿ.ರಮೇಶನ್ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಹೋಮಿಯೋ ಆಸ್ಪತ್ರೆಯ ವರಿಷ್ಠಾಧಿಕಾರಿ ಡಾ.ಕೆ.ರಾಮಸುಬ್ರಹ್ಮಣ್ಯಂ ಸ್ವಾಗತಿಸಿದರು. ಚೇತನಾ ಪೈನ್ ಆಂಡ್ ಪಾಲಿಯೇಟಿವ್ ಕೇಂದ್ರ ಸಂಚಾಲಕಿ ಡಾ.ಅಶ್ವತಿ ವಂದಿಸಿದರು.
ಪೈನ್ ಆಂಡ್ ಪಾಲಿಯೇಟಿವ್ ವಾಹನ:
ಕಾಸರಗೋಡು ಜಿಲ್ಲೆಯ ವಿವಿಧೆಡೆ ಹಾಸುಗೆ ಹಿಡಿದಿರುವ ರೋಗಿಗಳ ಸೇವೆಗಾಗಿ ಮೀಸಲು ವಾಹನ
ಕಾಞಂಗಾಡ್ ಸರಕಾರಿ ಜಿಲ್ಲಾ ಹೋಮಿಯೋ ಆಸ್ಪತ್ರೆಯಲ್ಲಿ ಚಟುವಟಿಕೆ ನಡೆಸುತ್ತಿರುವ ಪೈನ್ ಆಂಡ್ ಪಾಲಿಯೇಟಿವ್ ಕೇರ್ ಯೂನಿಟ್ ಗೆ ಮಂಜೂರು ಮಾಡಲಾದ ವಾಹನಕ್ಕೆ ಚಾಲನೆ ಲಭಿಸಿದ್ದು, ಕಾಸರಗೋಡು ಜಿಲ್ಲೆಯ ವಿವಿಧೆಡೆ ಹಾಸುಗೆ ಹಿಡಿದಿರುವ ರೋಗಿಗಳ ಸೇವೆಗಾಗಿ ಈ ವಾಹನ ಮೀಸಲಿರಿಸಲಾಗಿದೆ.
ಕಾಞಂಗಾಡ್ ವಿಧಾನಸಭೆ ಕ್ಷೇತ್ರದ ಶಾಸಕರೂ ಆಗಿರುವ ಕಂದಾಯ ಸಚಿವ ಇ.ಚಂದ್ರಶೇಖರನ್ ಅವರ 2019-20ನೇ ಸ್ಥಳೀಯ ಅಭಿವೃದ್ಧಿ ಯೋಜನೆಯಲ್ಲಿ ಅಳವಡಿಸಿ ವಾಹನ ಮಂಜೂರಾಗಿದೆ. 10,50,000 ರೂ. ಬೆಲೆಯ ವಾಹನ ಇಲ್ಲಿಗೆ ಲಭಿಸಿದೆ.
ಪಾಲಿಯೇಟಿವ್ ಒ.ಪಿ.ಗೆ ದಿನವೊಂದಕ್ಕೆ ಸುಮಾರು 25 ಮಂದಿ ರೋಗಿಗಳು ಚಿಕಿತ್ಸೆಗಾಗಿ ಆಗಮಿಸುತ್ತಾರೆ. ಇಲ್ಲಿನ ಚೇತನ ಪೈನ್ ಆಂಡ್ ಪಾಲಿಯೇಟಿವ್ ಕೇರ್ ಕೇಂದ್ರ ಈ ವರೆಗೆ ಖಾಸಗಿ ವಾಹನ ಬಳಸಿ ಅನಿವಾರ್ಯ ಹಂತಗಳಲ್ಲಿ ಸೇವೆಗಾಗಿ ತೆರಳುತ್ತಿದ್ದರು. ಸರಕಾರಿ ದರದಲ್ಲಿ ಬಾಡಿಗೆ ನೀಡಲಾಗುತ್ತಿದ್ದ ಕಾರಣ ವಾಹನಗಳು ಕ್ರಮೇಣ ಲಭಿಸದೇ ಹೋದ ಪರಿಸ್ಥಿತಿಯಲ್ಲಿ ಸೇವೆಗೆ ತೀವ್ರ ತೊಡಕಾಗುತ್ತಿತ್ತು. ಸ್ವಂತ ವಾಹನ ಲಭಿಸಿದ ಹಿನ್ನೆಲೆಯಲ್ಲಿ ಈಗ ಈ ಸಮಸ್ಯೆ ಬಗೆಹರಿದಿದೆ ಎಂದು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ಕೆ.ರಾಮಸುಬ್ರಹ್ಮಣ್ಯಂ ತಿಳಿಸಿದರು.