ಮಂಜೇಶ್ವರ: ಗಡಿನಾಡು ಕಾಸರಗೋಡಿನ ಭಾಷಾ ಸಮೃದ್ದತೆಯ ಪ್ರತೀಕವಾದ ತೌಳವ ಭಾಷೆಯನ್ನು ಸಮಗ್ರವಾಗಿ ಬೆಳೆಸುವಲ್ಲಿ ಕೇರಳ ತುಳು ಅಕಾಡೆಮಿ ಮಹತ್ತರ ಹೆಜ್ಜೆಗಳನ್ನಿರಿಸಿರುವುದು ಹೆಮ್ಮೆ ತಂದಿದೆ. ಮಣ್ಣಿನ ಸಾಂಸ್ಕøತಿಕತೆಯ ಬೇರುಗಳು ಗಟ್ಟಿಯಾದಾಗ ವರ್ತಮಾನದ ತಲ್ಲಣಗಳಿಂದ ಒಂದಷ್ಟು ನೆಮ್ಮದಿಯನ್ನು ಕಾಣಲು ಸಾಧ್ಯವಿದೆ ಎಂದು ರಾಜ್ಯ ಸಂಸ್ಕøತಿ ಸಚಿವ ಎ.ಕೆ.ಬಾಲನ್ ಅವರು ತಿಳಿಸಿದರು.
ಕೇರಳ ತುಳು ಅಕಾಡೆಮಿ ಮಂಜೇಶ್ವರ ಸಮೀಪದ ಹೊಸಂಗಡಿಯಲ್ಲಿ ನಿರ್ಮಿಸಿದ ತುಳು ಭವನವನ್ನು ಶುಕ್ರವಾರ ಸಂಜೆ ಆನ್ ಲೈನ್ ವೆಬಿನಾರ್ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ತುಳು ಅಕಾಡೆಮಿಯ ಸ್ಥಾಪನೆಯ ಬಳಿಕ ತುಳು ಭಾಷೆಯ ಸಮೃದ್ದಿಗೆ ವಿವಿಧ ಚಟುವಟಿಕೆಗಳನ್ನು ಸಮರ್ಥವಾಗಿ ನಿರ್ವಹಿಸಲು ಸಾಧ್ಯವಾಗಿರುವುದು ಹೆಮ್ಮೆಯ ವಿಚಾರ. ಜಾನಪದ, ರಾಷ್ಟ್ರೀಯ ವಿಚಾರ ಸಂಕಿರಣ, ತುಳು ಮಹೋತ್ಸವಗಳನ್ನು ವಿವಿಧೆಡೆ ಆಯೋಜಿಸಲಾಗಿದ್ದು, ಮುಂದಿನ ದಿನಗಳಲ್ಲಿ ತುಳು ಲಿಪಿಯನ್ನು ಆನ್ ಲೈನ್ ತರಗತಿ ನಡೆಸಲು ಉದ್ದೇಶಿಸಲಾಗಿದೆ. ತುಳು ಅಕಾಡೆಮಿಯ ಮೊದಲ ಅಧ್ಯಕ್ಷ ದಿ.ವೆಂಕಟರಾಜ ಪುಣಿಚಿತ್ತಾಯರ ಹೆಸರಲ್ಲಿ ಸಮಗ್ರ ಪುಸ್ತಕ ಭಂಡಾರವನ್ನೂ ತೆರೆದಿರುವುದು ಸ್ತುತ್ಯರ್ಹ. ಅಲ್ಲದೆ ತುಳು ಭಾಷೆಗೆ ಸಂವಿಧಾನ ಮಾನ್ಯತೆ ನೀಡಲು ಕಾಸರಗೋಡಿನ ಸಂಸದರ ನೇತೃತ್ವದಲ್ಲಿ ಪ್ರಯತ್ನಗಳು ಸಾಗುತ್ತಿದೆ. ರಾಜ್ಯ ಸರ್ಕಾರ ಕಳೆದ ಐದು ವರ್ಷಗಳಲ್ಲಿ ಸಂಸ್ಕøತಿ ಸಂವರ್ಧನೆಗೆ ಬೆಂಬಲ ನೀಡಿದೆ ಎoದರು.
ರಾಜ್ಯ ಕಂದಾಯ ಸಚಿವ ಇ.ಚಂದ್ರಶೇಖರನ್ ಅಧ್ಯಕ್ಷತೆ ವಹಿಸಿ ದೀಪ ಬೆಳಗಿಸಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿ, ತುಳುನಾಡಿನ ಹೆಮ್ಮೆಯ ಸಂಕೇಥವಾಗಿ ಭಾಷಾ ಅಲ್ಪಸಂಖ್ಯಾತರ ಜಿಲ್ಲೆಯಾಗಿರುವ ಕಾಸರಗೋಡಲ್ಲಿ ತುಳು ಅಕಾಡೆಮಿ ಬೆಳೆದುಬಂದಿರುವುದು ಸರ್ಕಾರ ತೌಳವ ಭಾಷೆಗೆ ನೀಡಿರುವ ಮಾನ್ಯತೆಯ ಸಂಕೇತವಾಗಿದೆ. ಸುಧೀರ್ಘ ಸಾಂಸ್ಕøತಿಕ ಹಿನ್ನೆಲೆಯ ತುಳು ಭಾಷೆಯ ಸಮೃದ್ದತೆಯನ್ನು ಜಗದಗಲ ವ್ಯಾಪಿಸುವಲ್ಲಿ ಅಕಾಡೆಮಿ ಇನ್ನಷ್ಟು ಕಾರ್ಯಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು ಎಂದು ತಿಳಿಸಿದರು. ಸಂವಿಧಾನದಲ್ಲಿ ತುಳು ಭಾಷೆಗೆ ಅಂಗೀಕಾರ ನೀಡುವ ನಿಟ್ಟಿನಲ್ಲಿ ತುಳು ಅಕಾಡೆಮಿಯ ಮೂಲಕ ಹೊಸ ಯತ್ನಗಳಾಗಲಿ ಎಂದು ಆಶಯ ವ್ಯಕ್ತಪಡಿಸಿದರು.
ವೆಂಕಟರಾಜ ಪುಣಿಚಿತ್ತಾಯ ಸ್ಮಾರಕ ಲೈಬ್ರರಿಯನ್ನು ಈ ಸಂದರ್ಭ ಜಿಲ್ಲಾ ಪಂಚಾಯತಿ ಅಧ್ಯಕ್ಷ ಎಜಿಸಿ ಬಶೀರ್ ಉದ್ಘಾಟಿಸಿದರು. ಬ್ಲಾ.ಪಂ. ಅಧ್ಯಕ್ಷ ಎ.ಕಡೆ.ಎಂ.ಅಶ್ರಫ್ ಅವರು ಕಾರ್ಯಾಲಯ ಉದ್ಘಾಟಿಸಿದರು. ತುಳು ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ ತೆಂಬೆರೆ ಹಾಗೂ ಜಿಲ್ಲಾ ಪಂಚಾಯತಿ ಹೊರತಂದಿರುವ ತೌಳವ ಸಂಸ್ಕøತಿ ಕೃತಿಯನ್ನು ಸಚಿವರು ಬಿಡುಗಡೆಗೊಳಿಸಿದರು. ಅಕಾಡೆಮಿ ಕಾರ್ಯಾಲಯದ ಕಂಪ್ಯೂಟರ್ ಕೊಠಡಿಯನ್ನು ಬ್ಲಾ.ಪಂ.ಸದಸ್ಯ ಕೆ.ಆರ್.ಜಯಾನಂದ ಉದ್ಘಾಟಿಸಿದರು.
ಶಾಸಕ ಎಂ.ಸಿ.ಖಮರುದ್ದೀನ್, ಜಿಲ್ಲಾ ಪಂಚಾಯತಿ ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ,ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ನ್ಯಾಯವಾದಿ ದಾಮೋದರ ಶೆಟ್ಟಿ, ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರದ ಅಧ್ಯಕ್ಷ ಎಂ.ಶಂಕರ ರೈ ಮಾಸ್ತರ್, ಮೀಂಜ ಪಂಚಾಯತಿ ಅಧ್ಯಕ್ಷೆ ಶಂಶಾದ್ ಶುಕೂರ್, ನೇತಾರರಾದ ಮೂಸಾ, ಬಿ.ವಿ.ರಾಜನ್, ಡಿ.ಎಂ.ಕೆ.ಮೊಹಮ್ಮದ್ ಮೊದಲಾದವರು ಉಪಸ್ಥಿತರಿದ್ದರು.ಜಿಲ್ಲಾಧಿಕಾರಿ ಡಾ.ಸಜಿತ್ ಬಾಬು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ತುಳು ಅಕಾಡೆಮಿ ಅಧ್ಯಕ್ಷ ಎಂ. ಉಮೇಶ್ ಸಾಲ್ಯಾನ್ ವಂದಿಸಿದರು. ಅಕಾಡೆಮಿ ಸದಸ್ಯರು ಉಪಸ್ಥಿತರಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ವೆಬಿನಾರ್ ಮೂಲಕ ಶುಭಹಾರೈಸಿದರು.