ಕುಂಬಳೆ: ಖಾಸಗಿ ಆಸ್ಪತ್ರೆಗಳ ಸಿಬ್ಬಂದಿಗೆ ಆರೋಗ್ಯ ಇಲಾಖೆಯ ಕೋವಿಡ್ ಪ್ರತಿರೋಧ ತರಬೇತಿ ನೀಡಲಾಯಿತು.
ಆರೋಗ್ಯ ಇಲಾಖೆಯ ಜಿಲ್ಲಾ ಮಟ್ಟದ ತರಬೇತಿ ವಿಭಾಗ, ಕುಂಬಳೆ ಸಿ.ಎಚ್.ಸಿ. ಜಂಟಿ ವತಿಯಿಂದ ಕುಂಬಳೆಯ ಖಾಸಗಿ ಆಸ್ಪತ್ರೆ ಸಿಬ್ಬಂದಿಗಾಗಿ ಈ ತರಬೇತಿ ನೀಡಲಾಯಿತು. ಆಸ್ಪತ್ರೆಯಲ್ಲಿ ರೋಗಾಣು ನಾಶ, ರೋಗ ಚಿಕಿತ್ಸೆ, ಪಿ.ಪಿ.ಇ. ಕಿಟ್ ಧರಿಸುವಿಕೆ, ರೋಗ ಪ್ರತಿರೋಧ, ಕ್ವಾರೆಂಟೈನ್ ನಿಬಂಧನೆ ಇತ್ಯಾದಿ ವಿಷಯಗಳಲ್ಲಿ ತರಬೇತಿ ನಡೆಯಿತು.
ಕೋವಿಡ್ ಸಂಪರ್ಕದಿಂದ ಸೋಂಕು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆಗಳಿಗೆ ರೋಗಿಗಳ ಜೊತೆಗೆ ಇತರರೂ ಬರುವುದನ್ನು ತಡೆಯಬೇಕು ಎಂಬುದು ಇಲ್ಲಿನ ಪ್ರಧಾನ ವಿಷಯವಾಗಿತ್ತು. ಅಪಾಯಕಾರಿ ತ್ಯಾಜ್ಯಗಳನ್ನು ವೈಜ್ಞಾನಿಕ ವಾಗಿ ಸಂಸ್ಕರಣಗೊಳಿಸುವ ಕ್ರಮಗಳು, ಸೋಂಕು ಗಣನೆಗೂ ಮೀರಿ ಹೆಚ್ಚಳಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಖಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆ ನೀಡುವ ನಿಟ್ಟಿನಲ್ಲಿ ಕೈಗೊಳ್ಳುವ ಮುಂಜಾಗರೂಕ ಕ್ರಮಗಳ ಸಂಬಂಧ ಆದೇಶಗಳನ್ನು ನೀಡಲಾಗಿದೆ.
ಕುಂಬಳೆಯ ಸಂತ ಮೋನಿಕಾ ಶಾಲೆಯ ಸಭಂಗಣದಲ್ಲಿ ನಡೆದ ಸಮಾರಂಭವನ್ನು ಕುಂಬಳೆ ಸಿ.ಎಚ್.ಸಿ.ಯ ವೈದ್ಯಾಧಿಕಾರಿ ಡಾ.ಕೆ.ದಿವಾಕರ ರೈ ಉದ್ಘಾಟಿಸಿದರು. ಡಾ.ಬಿ.ನಾರಾಯಣ ನಾಯ್ಕ್ ಅಧ್ಯಕ್ಷತೆ ವಹಿಸಿದ್ದರು. ಬ್ಲೋಕ್ ಆರೋಗ್ಯ ಮೇಲ್ವಿಚಾರಕ ಬಿ.ಅಶ್ರಫ್, ಡಾ.ಬಿ.ಅಪರ್ಣ, ನಸಿರ್ಂಗ್ ಟ್ಯೂಟರ್ ಶೆಲ್ಜಿ ಉಪಸ್ಥಿತರಿದ್ದರು.