ನವದೆಹಲಿ: ಈ ಕೊರೋನಾ ಸಂದರ್ಭದಲ್ಲಿಯೇ ಕೇಂದ್ರ ಸರ್ಕಾರವು ಗ್ರಾಹಕರಿಗೆ ಕಹಿ ಸುದ್ದಿಯೊಂದನ್ನು ನೀಡಿದೆ. ಈವರೆಗೆ ಅಡುಗೆ ಅನಿಲ ಸಿಲಿಂಡರ್ಗಳಿಗೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಕೇಂದ್ರ ಸರ್ಕಾರ ಸಂಪೂರ್ಣವಾಗಿ ಸ್ಥಗಿತಗೊಳಿಸಿದೆ. ಸೆಪ್ಟೆಂಬರ್ 1ರಿಂದಲೇ ಈ ನಿಯಮ ಜಾರಿಗೆ ಬಂದಿದೆ. ಜಾಗತಿಕ ತೈಲ ಬೆಲೆಗಳ ಕುಸಿತ ಮತ್ತು ಎಲ್ಪಿಜಿ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ನಿರಂತರವಾಗಿ ಏರಿಕೆಯಾಗುತ್ತಿರುವುದರಿಂದ ಕೇಂದ್ರ ಸರ್ಕಾರವು ದೇಶೀಯ ಅಡುಗೆ ಅನಿಲಕ್ಕೆ ನೀಡುತ್ತಿದ್ದ ಸಬ್ಸಿಡಿಯನ್ನು ಸ್ಥಗಿತಗೊಳಿಸಿದೆ ಎಂದು ತಿಳಿದು ಬಂದಿದೆ.
ಇನ್ಮುಂದೆ ಸಬ್ಸಿಡಿ ರಹಿತ ಮತ್ತು ಸಬ್ಸಿಡಿ ಸಹಿತ ಗ್ಯಾಸ್ ಸಿಲಿಂಡರ್ಗಳ ಬೆಲೆ ಒಂದೇ ಆಗಿರುತ್ತದೆ. ಯಾವುದೇ ಗ್ರಾಹಕ ಸಿಲಿಂಡರ್ ಖರೀದಿಸಿದರೂ ಏಕರೂಪದ ಬೆಲೆ ಪಾವತಿಸಬೇಕು. ಸದ್ಯ 14.2 ಕೆಜಿ ತೂಕದ ಸಿಲಿಂಡರ್ಗೆ 594 ರೂಪಾಯಿ ನಿಗದಿಪಡಿಸಲಾಗಿದೆ. ಇನ್ಮುಂದೆ ಕೇಂದ್ರ ಸರ್ಕಾರವು ಗ್ಯಾಸ್ ಸಿಲಿಂಡರ್ಗಳಿಗೆ ನೇರ ವರ್ಗಾವಣೆ ಯೋಜನೆಯಡಿ ಸಬ್ಸಿಡಿ ಹಣವನ್ನು ಫಲಾನುಭವಿಗಳ ಖಾತೆಗೆ ಪಾವತಿಸುವುದಿಲ್ಲ. ಪ್ರಸ್ತುತ ಆರ್ಥಿಕ ವರ್ಷದ ಆರಂಭದಿಂದಲೇ ಸಬ್ಸಿಡಿ ಸಹಿತ ಮತ್ತು ಸಬ್ಸಿಡಿ ರಹಿತ ಅಡುಗೆ ಅನಿಲದ ನಡುವಿನ ಬೆಲೆಯ ಅಂತರ ಕಡಿಮೆ ಅಗುತ್ತಿತ್ತು. ಜೊತೆಗೆ ಸರ್ಕಾರವು ಕಳೆದ ನಾಲ್ಕು ತಿಂಗಳಿನಿಂದ ಯಾವುದೇ ಫಲಾನುಭವಿಗಳ ಖಾತೆಗೆ ಸಬ್ಸಿಡಿ ಹಣವನ್ನು ಹಾಕಿರಲಿಲ್ಲ ಎಂಬ ವಿಷಯವನ್ನು ಇಲ್ಲಿ ಗಮನಿಸಬೇಕು. ಸಬ್ಸಿಡಿ ಹಣವನ್ನು ಪಾವತಿ ಮಾಡಿಲ್ಲದಿರುವುದಕ್ಕೆ ಸರ್ಕಾರ ಯಾವುದೇ ಕಾರಣವನ್ನೂ ಸಹ ನೀಡಿರಲಿಲ್ಲ. ಇದೀಗ ಏಕಾಏಕಿ ಗ್ಯಾಸ್ ಸಿಲಿಂಡರ್ಗಳ ಮೇಲಿನ ಸಬ್ಸಿಡಿಯನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಿ ನಿಯಮ ಜಾರಿ ಮಾಡಿದೆ.