ನವದೆಹಲಿ: ಪೂರ್ವ ಲಡಾಕ್ ಗಡಿಯಲ್ಲಿ ಮುಂದುವರಿದಿರುವ ಸೇನೆ ನಿಲುಗಡೆ, ಉದ್ವಿಗ್ನ ವಾತಾವರಣವನ್ನು ತಗ್ಗಿಸಲು 7ನೇ ಸುತ್ತಿನ ಭಾರತ-ಚೀನಾ ದೇಶಗಳ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ಇದೇ 12ರಂದು ಏರ್ಪಡಲಿದೆ.
ಎರಡೂ ದೇಶಗಳ ಮಧ್ಯೆ ಮುಂದುವರಿದಿರುವ ಸೇನೆ ನಿಲುಗಡೆ ಪರಿಸ್ಥಿತಿ ಕುರಿತು ಚರ್ಚೆ ನಡೆಸಲು ಪೂರ್ವ ಲಡಾಕ್ ವಲಯದಲ್ಲಿ ಕಮಾಂಡರ್ ಮಟ್ಟದ ಮಾತುಕತೆ ಅಕ್ಟೋಬರ್ 12ರಂದು ನಡೆಯಲಿದೆ. ಇದುವರೆಗೆ ಎರಡೂ ದೇಶಗಳು ಮಧ್ಯೆ 6 ಸುತ್ತಿನ ಕಾರ್ಪ್ಸ್ ಕಮಾಂಡರ್ ಮಟ್ಟದ ಮಾತುಕತೆ ನಡೆದಿದೆ ಎಂದು ಭಾರತೀಯ ಸೇನೆಯ ಮೂಲಗಳು ತಿಳಿಸಿವೆ.
ಗಾಲ್ವಾನ್ ಕಣಿವೆ ತನಗೆ ಸೇರಿದ್ದು ಎಂಬುದು ಚೀನಾದ ಪ್ರತಿಪಾದನೆಯಾಗಿದೆ. ಆದರೆ ಭಾರತ ಅದನ್ನು ತಿರಸ್ಕರಿಸಿದೆ. ಗಾಲ್ವಾನ್ ಕಣಿವೆಯ ಮೇಲಿನ ಹಕ್ಕು ಈ ಹಿಂದೆ ತನ್ನದೇ ಆದ ಸ್ಥಾನಕ್ಕೆ ಅನುಗುಣವಾಗಿರಲಿಲ್ಲ ಎಂದು ಭಾರತ ಹೇಳುತ್ತದೆ, ಚೀನಾದ ಕಡೆಯಿಂದ ಉಲ್ಲಂಘನೆಯ ಪ್ರಯತ್ನಗಳು ಸತತವಾಗಿ ನಡೆಯುತ್ತಿದೆ ಅದಕ್ಕೆ ಇದುವರೆಗೆ ಭಾರತೀಯ ಸೇನೆ ತಕ್ಕ ಪ್ರತ್ಯುತ್ತರ ನೀಡುತ್ತಾ ಬಂದಿದೆ.
16 ಬಿಹಾರ್ ನ ಕಮಾಂಡಿಂಗ್ ಆಫೀಸರ್ ಕರ್ನಲ್ ಬಿ ಸಂತೋಷ್ ಬಾಬು ಸೇರಿ 20 ಮಂದಿ ಭಾರತೀಯ ಯೋಧರು ಕಳೆದ ಜೂನ್ 15ರಂದು ಚೀನಾದ ಪೀಪಲ್ಸ್ ಲಿಬರೇಷನ್ ಆರ್ಮಿಯೊಂದಿಗೆ ಗಾಲ್ವಾನ್ ಕಣಿವೆಯ ಗಸ್ತು ಕೇಂದ್ರ 14ರಲ್ಲಿ ಸತತ 7 ಗಂಟೆಗಳ ಕಾಲ ನಡೆದ ಘರ್ಷಣೆಯಲ್ಲಿ ಹುತಾತ್ಮರಾಗಿದ್ದರು.
ಗಡಿ ವಾಸ್ತವ ರೇಖೆ(ಎಲ್‌ಎಸಿ)ಯ ಬಳಿ ಸೇನೆ ನಿಲುಗಡೆಗೆ ಸಂಬಂಧಿಸಿದಂತೆ 5ನೇ ಸುತ್ತಿನ ರಾಜತಾಂತ್ರಿಕ ಮಾತುಕತೆಯಲ್ಲಿ ಸೇನೆಯನ್ನು ಹಿಂತೆಗೆದುಕೊಳ್ಳುವ ಬಗ್ಗೆ ಒಮ್ಮತವನ್ನು ಜಾರಿಗೆ ತರುವ ಅಗತ್ಯವನ್ನು ಉಭಯ ರಾಷ್ಟ್ರಗಳು ಒಪ್ಪಿಕೊಂಡಿದ್ದರೂ, ಯಾವುದೇ ಮಹತ್ವದ ಪ್ರಗತಿ ಸಾಧಿಸಿಲ್ಲ.