ನವದೆಹಲಿ: ಆರ್ಥಿಕತೆಯನ್ನು ಹೆಚ್ಚಿಸುವ ಉದ್ದೇಶದಿಂದ ಬಂಡವಾಳ ಯೋಜನೆಗಳಿಗೆ ವೆಚ್ಚ ಮಾಡಲು ರಾಜ್ಯಗಳಿಗೆ 50 ವರ್ಷಗಳ ಬಡ್ಡಿರಹಿತವಾದ 12 ಸಾವಿರ ಕೋಟಿ ಸಾಲವನ್ನು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ ಘೋಷಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ನಿರ್ಮಲಾ ಸೀತಾರಾಮನ್, ಈ 12 ಸಾವಿರ ಕೋಟಿಯಲ್ಲಿ 1600 ಕೋಟಿಯನ್ನು ಈಶಾನ್ಯ ರಾಜ್ಯಗಳಿಗೆ ಮತ್ತು 900 ಕೋಟಿಯನ್ನು ಉತ್ತರ್ ಖಂಡ್ ಮತ್ತು ಹಿಮಾಚಲ ಪ್ರದೇಶಕ್ಕೆ ನೀಡಲಾಗುವುದು ಎಂದರು.
ಉಳಿದ 7 ಸಾವಿರದ 500 ಕೋಟಿಯನ್ನು ಉಳಿದಂತಹ ರಾಜ್ಯಗಳಿಗೆ ನೀಡಲಾಗುವುದು, ಪೂರ್ವ ಘೋಷಿತ ಸುಧಾರಣೆಗಳನ್ನು ಈಡೇರಿಸಿದ ರಾಜ್ಯಗಳಿಗೆ 2 ಕೋಟಿಯನ್ನು ನೀಡಲಾಗುವುದು ಎಂದು ತಿಳಿಸಿದರು.
ಹೊಸ ಅಥವಾ ನಡೆಯುತ್ತಿರುವ ಬಂಡವಾಳ ಯೋಜನೆಗಳಿಗೆ ಈ ಸಾಲವನ್ನು ಸಂಪೂರ್ಣವಾಗಿ ವೆಚ್ಚ ಮಾಡಬಹುದಾಗಿದೆ. ರಾಜ್ಯಗಳು ಗುತ್ತಿಗೆದಾರರು ಮತ್ತು ಪೂರೈಕೆದಾರರ ಬಿಲ್ ಗಳನ್ನು ಪರಿಹರಿಸಬಹುದಾಗಿದೆ ಆದರೆ, ಎಲ್ಲಾ ಮೊತ್ತವನ್ನು ಮುಂದಿನ ವರ್ಷದ ಮಾರ್ಚ್ 31ಕ್ಕೂ ಮುಂಚಿತವಾಗಿ ಪಾವತಿಸಬೇಕಾಗುತ್ತದೆ ಎಂದು ಹೇಳಿದರು.
ರಾಜ್ಯಗಳು ಸಾಲ ಪಡೆಯುವ ಸಾಮರ್ಥ್ಯದ ಆಧಾರದ ಮೇಲೆ ಸಾಲ ನೀಡಲಾಗುವುದು, 50 ವರ್ಷಗಳ ನಂತರ ಮರುಪಾವತಿಸಬೇಕಾಗುತ್ತದೆ ಎಂದು ಹೇಳಿದ ಸಚಿವರು, ಕೇಂದ್ರ ಸರ್ಕಾರದಿಂದ 25 ಸಾವಿರ ಕೋಟಿ ಹೆಚ್ಚುವರಿ ಬಂಡವಾಳ ವೆಚ್ಚವನ್ನು ಘೋಷಿಸಿದರು.
4.13 ಲಕ್ಷ ಕೋಟಿ ಬಜೆಟ್ ಗೆ ಇದನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತಿದ್ದು, ರಸ್ತೆ ರಕ್ಷಣಾ ಮೂಲಸೌಕರ್ಯ, ನೀರು ಪೂರೈಕೆ ಮತ್ತು ನಗರಾಭಿವೃದ್ಧಿಗಾಗಿ ಹೆಚ್ಚುವರಿ ಹಣವನ್ನು ವೆಚ್ಚ ಮಾಡಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು.