ಕಾಸರಗೋಡು: ಪ್ರಕೃತಿ ವಿಕೋಪವನ್ನು ನೈಸರ್ಗಿಕವಾಗಿ ಪ್ರತಿರೋಧಿಸುವ ನಿಟ್ಟಿನಲ್ಲಿ, ಪ್ರಕೃತಿಗೆ ಅನುಯೋಜ್ಯವಾಗಿ ಬದುಕುವ ನಿಟ್ಟಿನಲ್ಲಿ ಮಾದರಿಯಾಗುವ ಉದ್ದೇಶದಿಂದ ರಾಜ್ಯ ಸರಕಾರ ಜಾರಿಗೊಳಿಸುವ ಒಂದು ಸಾವಿರ ಹಸುರು ದ್ವೀಪಗಳ ಯೋಜನೆಯ ಘೋಷಣೆ ಅ.15ರಂದು ನಡೆಯಲಿದೆ.
ಬೆಳಗ್ಗೆ 10 ಗಂಟೆಗೆ ವೀಡಿಯೋ ಕಾನ್ ಫೆರೆನ್ಸ್ ಮೂಲಕ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಘೋಷಣೆ ನಡೆಸುವರು. ಸ್ಥಲೀಯಾಡಳಿತ ಇಲಾಖೆ ಸಚಿವ ಎ.ಸಿ.ಮೊಯ್ದೀನ್ ಅಧ್ಯಕ್ಷತೆ ವಹಿಸುವರು.
ಈ ಸಮಾರಂಭ ಅಂಗವಾಗಿ ಕಾಸರಗೋಡು ಜಿಲ್ಲೆಯಲ್ಲಿ ಹಸುರುದ್ವೀಪ ಯೋಜನೆ ಜಾರಿಗೊಳಿಸಿದ ಎಲ್ಲ ಸ್ಥಲೀಯಾಡಳಿತ ಸಂಸ್ಥೇಗಳಿಗೆ ಹರಿತ ಕೇರಳಂ ಮಿಸನ್ ನ ಅರ್ಹತಾಪತ್ರದ ವಿತರಣೆ ನಡೆಯಲಿದೆ. ಕೋವಿಡ್ 19 ಸಂಹಿತೆಗಳನ್ನು ಪಾಲಿಸುವ ಮೂಲಕ ನಡೆಯುವ ಸಮಾರಂಭದಲ್ಲಿ ಸಾಮಾಜಿಕ-ಸಾಂಸ್ಕøತಿಕ-ರಾಜಕೀಯ ವಲಯಗಳ ಗಣ್ಯರು ಭಾಗವಹಿಸುವರು.
ಹಸುರು ದ್ವೀಪ ಯೋಜನೆ:
ಹರಿತ ಕೇರಳಂ ಮಿಷನ್ ನೇತೃತ್ವದಲ್ಲಿ ಸ್ಥಳೀಯಾಡಳಿತ ಸಂಸ್ಥೆಗಳ ಸಹಕಾರದೊಂದಿಗೆ ಕೃಷಿ ಜಾಗದಲ್ಲೋ, ಅರಣ್ಯ ಪ್ರದೇಶದಲ್ಲೋ, ವಿವಿಧೆಡೆ ಬಳಕೆಯಿಲ್ಲದ ಸಾರ್ವಜನಿಕ/ ಖಾಸಗಿ ಜಾಗಗಳಲ್ಲಿ ವೃಕ್ಷಗಳಾಗಬಲ್ಲ ಸಸಿಗಳನ್ನು ನೆಟ್ಟು ಬೆಳೆಸಿ, ಕಿರು ವನಗಳನ್ನು ನಿರ್ಮಿಸುವುದೇ ಹಸುರು ದ್ವೀಪ ಯೋಜನೆ. ಒಂದು ಸಾವಿರ ಹಸುರು ದ್ವೀಪಗಳನ್ನು ಗುರಿಯಿರಿಸಿ ಆರಂಭಿಸಲಾದ ಯೋಜನೆಯಲ್ಲಿ ಈಗಾಗಲೇ 1261 ಹಸುರು ದ್ವೀಪಗಳಿವೆ.
ಕಾಸರಗೋಡು ಜಿಲ್ಲೆಯಲ್ಲಿ:
ಕಾಸರಗೋಡು ಜಿಲ್ಲೆಯಲ್ಲೂ ಗಮನಾರ್ಹ ರೂಪದಲ್ಲಿ ಹಸುರು ದ್ವೀಪ ಯೋಜನೆ ಜಾರಿಗೊಂಡಿದೆ. ಇಲ್ಲಿ 38 ಸ್ಥಲೀಯಾಡಳಿತ ಸಂಸ್ಥೆಗಳಲ್ಲಿ 251 ಹಸುರು ದ್ವೀಪಗಳು ನಿರ್ಮಾಣಗೊಂಡಿವೆ. ನೌಕರಿ ಖಾತರಿ ಯೋಜನೆಯ, ಕುಟುಂಬಶ್ರೀ, ಸ್ವಯಂ ಸೇವಾ ಸಂಘಟನೆಗಳ ಕಾರ್ಯಕರ್ತರ, ಶಾಲಾ ರಕ್ಷಕ-ಶಿಕ್ಷಕ ಸಂಘಗಳ, ಎಸ್.ಎಸ್.ಜಿಗಳ ಸಹಾಯದೊಂದಿಗೆ ಈ ಯೋಜನೆ ಜಾರಿಗೊಳ್ಳುತ್ತಿವೆ. ಮಂಜೇಶ್ವರ ಬ್ಲೋಕ್ ನಲ್ಲಿ 16, ಕಾಸರಗೋಡು ಬ್ಲೋಕ್ ನಲ್ಲಿ 11, ಕಾರಡ್ಕ ಬ್ಲೋಕ್ ನಲ್ಲಿ 7, ಪರ್ಪ ಬ್ಲೋಕ್ ನಲ್ಲಿ 37, ಕಾಞಂಗಾಡ್ ಬ್ಲೋಕ್ ನಲ್ಲಿ 67, ನೀಲೇಶ್ವರಂ ಬ್ಲೋಕ್ ನಲ್ಲಿ 91, ನಗರಸಭೆಗಳಲ್ಲಿ 22, ಹೀಗೆ 97.5 ಎಕ್ರೆ ಜಾಗದಲ್ಲಿ 251 ಹಸುರು ದ್ವೀಪಗಳು ಕಾಸರಗೋಡು ಜಿಲ್ಲೆಯಲ್ಲಿವೆ.