ತಿರುವನಂತಪುರ: ಕೋವಿಡ್ ಹರಡುವುದನ್ನು ನಿಯಂತ್ರಿಸಲು ಜಿಲ್ಲಾಧಿಕಾರಿಗಳು ವಿವಿಧ ಜಿಲ್ಲೆಗಳಲ್ಲಿ ರಾಜ್ಯ ಸರ್ಕಾರ ಘೋಷಿಸಿದ ನಿಷೇಧವನ್ನು ನವೆಂಬರ್ 15 ರವರೆಗೆ ವಿಸ್ತರಿಸಿದ್ದಾರೆ. ಅಕ್ಟೋಬರ್ 3 ರಂದು ರಾತ್ರಿ 9 ಗಂಟೆಗೆ ರಾಜ್ಯವ್ಯಾಪಿ ಜಿಲ್ಲಾ ನಿಷೇಧವನ್ನು ಘೋಷಿಸಲಾಗಿತ್ತು. ಇಂದು ರಾತ್ರಿ 12 ರವರೆಗೆ ನಿಷೇಧಾಜ್ಞೆ ಜಾರಿಯಲ್ಲಿರಲಿದೆ ಎಂದು ಈ ಹಿಂದೆ ಸರ್ಕಾರ ಆದೇಶಿಸಿತ್ತು.
ಇಂದು ನಿಷೇಧಾಜ್ಞೆ ಕೊನೆಗೊಳ್ಳುತ್ತಿರುವುದರಿಂದ ನಿಷೇಧವನ್ನು ಮತ್ತೆ ವಿಸ್ತರಿಸಬೇಕೆ ಅಥವಾ ಬೇಡವೇ ಎಂಬುದನ್ನು ನಿರ್ಧರಿಸುವುದು ಆಯಾ ಜಿಲ್ಲಾಧಿಕಾರಿಗಳಿಗೆ ಬಿಟ್ಟದ್ದು ಎಂದು ಸರ್ಕಾರ ಸ್ಪಷ್ಟಪಡಿಸಿತ್ತು. ಇದರ ಬೆನ್ನಲ್ಲೇ ವಿವಿಧ ಜಿಲ್ಲಾಧಿಕಾರಿಗಳು ನಿಷೇಧವನ್ನು ನವೆಂಬರ್ 15 ರವರೆಗೆ ವಿಸ್ತರಿಸುವ ಆದೇಶ ಹೊರಡಿಸಿರುವರು.
ತ್ರಿಶೂರ್, ಪತ್ತನಂತಿಟ್ಟು, ಆಲಪ್ಪುಳ, ಎರ್ನಾಕುಳಂ ಮತ್ತು ಮಲಪ್ಪುರಂ ಜಿಲ್ಲಾಧಿಕಾರಿಗಳು ಈ ನಿಷೇಧವನ್ನು ಘೋಷಿಸಿದ್ದಾರೆ. ನಿಷೇಧ ವಿಸ್ತರಣೆ ಕುರಿತು ಇಂದು ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದು ತಿರುವನಂತಪುರ ಜಿಲ್ಲಾಧಿಕಾರಿ ಮಾಹಿತಿ ನೀಡಿದ್ದಾರೆ.
ನಿಷೇಧವನ್ನು ವಿಸ್ತರಿಸುತ್ತಿರುವ ಜಿಲ್ಲೆಗಳಲ್ಲಿ ಈಗ ಜಾರಿಯಲ್ಲಿರುವ ನಿರ್ಬಂಧಗಳು ಯಥಾ ಪ್ರಕಾರ ಜಾರಿಯಲ್ಲಿರುತ್ತವೆ. ಐದು ಜನರಿಗಿಂತ ಹೆಚ್ಚು ಜನರು ಸಾರ್ವಜನಿಕ ಸ್ಥಳಗಳಲ್ಲಿ ಸಭೆ ಸೇರಬಾರದು ಎಂಬ ನಿರ್ದೇಶನವು ಎಲ್ಲೆಡೆ ಅನ್ವಯಿಸುತ್ತದೆ. ಸರ್ಕಾರಿ ಸಮಾರಂಭಗಳು ಧಾರ್ಮಿಕ ಸಮಾರಂಭಗಳು ಪ್ರಾರ್ಥನೆಗಳು, ರಾಜಕೀಯ ಮತ್ತು ಸಾಮಾಜಿಕ ಕಾರ್ಯಕ್ರಮಗಳಲ್ಲಿ ಕೇವಲ 20 ಜನರು ಮಾತ್ರ ಪಾಲ್ಗೊಳ್ಳಬಹುದಾಗಿದೆ. ಇಲ್ಲಿಯವರೆಗೆ, ತಿರುವನಂತಪುರಂನ ಕಂಟೈನ್‍ಮೆಂಟ್ ವಲಯದಲ್ಲಿ ಮತ್ತು ಹೊರಗೆ ವಿವಿಧ ನಿಬಂಧನೆಗಳನ್ನು ವಿಧಿಸಲಾಗಿತ್ತು. ಕಂಟೈನ್‍ಮೆಂಟ್ ವಲಯದಲ್ಲಿ ಕೇವಲ 20 ಜನರಿಗೆ ಮದುವೆ ಮತ್ತು ಮರಣ ಸಮಾರಂಭಗಳಲ್ಲಿ ಭಾಗವಹಿಸಲು ಅವಕಾಶವಿದೆ. ವಲಯದ ಹೊರಗಿನ ವಿವಾಹಕ್ಕೆ 50 ಜನರು ಭಾಗವಹಿಸಬಹುದು.
ಇತರ ಜಿಲ್ಲೆಗಳಲ್ಲಿ, ಮದುವೆಗೆ 50 ಮತ್ತು ಮರಣೋತ್ತರ ಸಮಾರಂಭಗಳಿಗೆ 20 ಮಂದಿ ಭಾಗವಹಿಸಬಹುದಾಗಿದೆ. ಪಿಎಸ್‍ಸಿ ಸೇರಿದಂತೆ ಪರೀಕ್ಷೆಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ಸಾರ್ವಜನಿಕ ಸಾರಿಗೆಗೆ ಯಾವುದೇ ಅಡಚಣೆ ಇಲ್ಲ. ಸರ್ಕಾರಿ ಕಚೇರಿಗಳು, ಸಾರ್ವಜನಿಕ ವಲಯದ ಸಂಸ್ಥೆಗಳು, ಬ್ಯಾಂಕುಗಳು ಮತ್ತು ಹೋಟೆಲ್‍ಗಳು ಕೋವಿಡ್ ನಿಯಂತ್ರಕ ನಿಬಂಧನೆಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸಲಿವೆ. ನಿಷೇಧವನ್ನು ಹೊರತುಪಡಿಸಿ ಎಲ್ಲಿಯೂ ಸಂಪೂರ್ಣ ಬಂದ್ ಇರುವುದಿಲ್ಲ.