ಕಾಸರಗೋಡು: ಕಾಸರಗೋಡು ಜಿಲ್ಲೆಯ ಕೋವಿಡ್ ಪ್ರತಿರೋಧ ಚಟುವಟಿಕೆಗಳ ಅಂಗವಾಗಿ ಟಾಟಾ ಸಮೂಹ ಸಂಸ್ಥೆ ಉಚಿತವಾಗಿ ನಿರ್ಮಿಸಿ ರಾಜ್ಯ ಸರಕಾರಕ್ಕೆ ಹಸ್ತಾಂತರಿಸಿರುವ ನೂತನ ಆಸ್ಪತ್ರೆಯಲ್ಲಿ 191 ನೂತನ ಹುದ್ದೆಗಳನ್ನು ಸೃಷ್ಟಿಸಲು ರಾಜ್ಯ ಸಚಿವ ಸಂಪುಟ ಸಭೆ ನಿರ್ಧರಿಸಿದೆ.
ಈ ಹುದ್ದೆಗಳು ಒಂದು ವರ್ಷದ ಅವಧಿಯ ತಾತ್ಕಾಲಿಕ ನೇಮಕಾತಿ ಯಾ ಡೆಪ್ಯೂಟೇಷನ್ ವ್ಯವಸ್ಥೆಯ ಕರಾರಿನಲ್ಲಿ ಸಿಬ್ಬಂದಿ ನೇಮಕಾತಿ ನಡೆಸಲಾಗುವುದು ಎಂದು ಸಭೆ ತಿಳಿಸಿದೆ.
ಕೋವಿಡ್ ಸೋಂಕಿನ ಆರಂಭದ ಹಂತದಲ್ಲಿ ಕಾಸರಗೊಡು ಜಿಲ್ಲೆಯಲ್ಲಿ ಅತ್ಯಧಿಕ ಪ್ರಮಾಣದ ಕೇಸುಗಳು ವರದಿಯಾದ ಹಿನ್ನೆಲೆಯಲ್ಲಿ ಟಾಟಾ ಸಮೂಹ ಸಂಸ್ಥೆ ಅತ್ಯಾಧುನಿಕ ಸೌಲಭ್ಯಗಳೊಂದಿಗೆ ತೆಕ್ಕಿಲ್ ಗ್ರಾಮದಲ್ಲಿ ಈ ಆಸ್ಪತ್ರೆಯನ್ನು ನಿರ್ಮಿಸಿ ನೀಡಿದೆ.