ನವದೆಹಲಿ: ಕೋವಿಡ್ -19 ಪ್ರಕರಣಗಳು ಹೆಚ್ಚು ವರದಿಯಾಗುತ್ತಿರುವ ಕರ್ನಾಟಕ, ಕೇರಳ, ರಾಜಸ್ಥಾನ, ಛತ್ತೀಸ್‌ಗಢ ಮತ್ತು ಪಶ್ಚಿಮ ಬಂಗಾಳಕ್ಕೆ ಕೇಂದ್ರ ಸರ್ಕಾರ ಉನ್ನತ ಮಟ್ಟದ ಅಧಿಕಾರಿಗಳ ತಂಡ ನಿಯೋಜಿಸಿದೆ.
ಕಂಟೈನ್ ಮೆಂಟ್ ಜೋನ್, ಕಣ್ಗಾವಲು, ಪರೀಕ್ಷೆ, ಸೋಂಕು ತಡೆಗಟ್ಟುವಿಕೆ ಮತ್ತು ನಿಯಂತ್ರಣ ಕ್ರಮಗಳು ಮತ್ತು ಪಾಸಿಟಿವ್ ಪ್ರಕರಣಗಳ ಸಮರ್ಥ ವೈದ್ಯಕೀಯ ನಿರ್ವಹಣೆಗೆ ಕೇಂದ್ರ ತಂಡ ರಾಜ್ಯಗಳಿಗೆ ನೆರವು ನೀಡಲಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ತಿಳಿಸಿದೆ.
"ಕೊರೋನಾಗೆ ಸಮಯೋಚಿತ ಚಿಕಿತ್ಸೆ ಮತ್ತು ಇತರೆ ಸವಾಲುಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸಲು ರಾಜ್ಯಗಳಿಗೆ ಕೇಂದ್ರ ತಂಡಗಳು ಮಾರ್ಗದರ್ಶನ ನೀಡುತ್ತವೆ" ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಪ್ರತಿ ತಂಡವು ಜಂಟಿ ಕಾರ್ಯದರ್ಶಿ(ಆಯಾ ರಾಜ್ಯದ ನೋಡಲ್ ಅಧಿಕಾರಿ), ಸಾರ್ವಜನಿಕ ಆರೋಗ್ಯ ಅಂಶಗಳನ್ನು ನೋಡಿಕೊಳ್ಳಲು ಒಬ್ಬ ಸಾರ್ವಜನಿಕ ಆರೋಗ್ಯ ತಜ್ಞರು, ಸೋಂಕು ತಡೆಗಟ್ಟುವ ಸಂಬಂಧ ಒಬ್ಬ ವೈದ್ಯ ಮತ್ತು ರಾಜ್ಯವು ಅನುಸರಿಸುತ್ತಿರುವ ಕ್ಲಿನಿಕಲ್ ಮ್ಯಾನೇಜ್‌ಮೆಂಟ್ ಪ್ರೋಟೋಕಾಲ್ ಅನ್ನು ಒಳಗೊಂಡಿರುತ್ತದೆ.
ರಾಜ್ಯದಲ್ಲಿ ಕೋವಿಡ್ ಆತಂಕ ಮುಂದುವರಿದಿರುವಂತೆ ಇಂದು 7283 ಜನರಿಗೆ ಸೋಂಕು ಪತ್ತೆಯಾಗಿದೆ.ಕಳೆದ 24 ಗಂಟೆಗಳಲ್ಲಿ ಕೇವಲ 51,836 ಮಾದರಿಗಳನ್ನು ಮಾತ್ರ ಪರೀಕ್ಷಿಸಲಾಗಿದೆ. ಇದು ಚಿಕಿತ್ಸೆಯಲ್ಲಿರುವ ಒಟ್ಟು ರೋಗಿಗಳು 95,008 ಕ್ಕೆ ಏರಿದೆ. ಈವರೆಗೆ 2,28,998 ಮಂದಿ ಗುಣಮುಖರಾಗಿರುವರು.
ಕಳೆದ 24 ಗಂಟೆಗಳಲ್ಲಿ ದೇಶದಲ್ಲಿ ಇನ್ನೂ 63,371 ಕೋವಿಡ್ ಪ್ರಕರಣಗಳು ದೃ ಢಪಟ್ಟಿದ್ದು, ಒಟ್ಟು ಪ್ರಕರಣಗಳ ಸಂಖ್ಯೆ 73,70,469 ಕ್ಕೆ ತಲುಪಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ದೇಶದ ವಿವಿಧ ರಾಜ್ಯಗಳಲ್ಲಿ ಒಟ್ಟು 8,04,528 ಜನರು ಚಿಕಿತ್ಸೆ ಪಡೆಯುತ್ತಿದ್ದಾರೆ. ನಿನ್ನೆ 64,53,780 ಜನರನ್ನು ಗುಣಪಡಿಸಲಾಗಿದೆ ಎಂಬುದು ಒಂದು ಮಹತ್ತರ ಸಾಧನೆಯಾಗಿದೆ.