ನವದೆಹಲಿ: ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೊರೋನಾ ವಿರುದ್ಧ ಹೋರಾಡಲು ಎಲ್ಲರೂ ಜತೆಗೂಡಿ ಸಂಘಟಿತರಾಗೋಣ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
ಕೋವಿಡ್ ವಾರಿಯರ್ ಗಳಿಂದ ಕೊರೋನಾ ವಿರುದ್ಧದ ಹೋರಾಟಕ್ಕೆ ಬಲ ಸಿಕ್ಕಿದೆ. ವೈರಸ್ ನಿಂದ ಜನರನ್ನು ರಕ್ಷಿಸಿ ಜೀವನದಲ್ಲಿ ಮುಂದುವರಿಯಲು ನಮ್ಮ ಈ ಹೋರಾಟ ಇನ್ನು ಕೆಲ ಸಮಯಗಳವರೆಗೆ ಮುಂದುವರಿಯಬೇಕು ಎಂದು ಪ್ರಧಾನಿ ತಮ್ಮ ಕರೆಯಲ್ಲಿ ದೇಶವಾಸಿಗಳಿಗೆ ಹೇಳಿದ್ದಾರೆ.
ಭಾರತದಲ್ಲಿ ಕೋವಿಡ್-19 ವಿರುದ್ಧದ ಹೋರಾಟ ಜನಸ್ನೇಹಿಯಾಗಿದ್ದು ಕೋವಿಡ್ ವಾರಿಯರ್ ಗಳಿಂದ ಇದಕ್ಕೆ ಹೆಚ್ಚಿನ ಬಲ ಸಿಕ್ಕಿದೆ. ನಮ್ಮ ಸಾಮೂಹಿಕ ಪ್ರಯತ್ನದಿಂದ ಹಲವು ಜೀವಗಳನ್ನು ಉಳಿಸಲು ಸಾಧ್ಯವಾಗಿದೆ. ಈ ಪ್ರಯತ್ನವನ್ನು ನಾವು ಮುಂದುವರಿಸಿ ನಾಗರಿಕರನ್ನು ಭಯಾನಕ ವೈರಸ್ ನಿಂದ ಕಾಪಾಡಬೇಕಿದೆ ಎಂದು ದೇಶದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಪ್ರಧಾನಿ ಟ್ವೀಟ್ ಮಾಡಿದ್ದಾರೆ.
ಕೊರೋನಾ ಮಧ್ಯೆಯೇ ಇಂದು ಬದುಕು ಕಟ್ಟಿಕೊಳ್ಳಬೇಕಾದ ಪರಿಸ್ಥಿತಿಯಿದೆ. ಆರ್ಥಿಕ ಸಂಕಷ್ಟದ ಮಧ್ಯೆ ಹೊರಗೆ ಕೆಲಸಕ್ಕೆ ಓಡಾಡಬೇಕಾಗಿದೆ, ಹೀಗಿರುವಾಗ ನಾಗರಿಕರು ಸಾಧ್ಯವಾದಷ್ಟು ತಮ್ಮ ಸುರಕ್ಷತೆಯನ್ನು ಕಾಪಾಡಿಕೊಳ್ಳಬೇಕು, ಮಾಸ್ಕ್ ಧರಿಸುವುದು, ಕೈ ತೊಳೆಯುತ್ತಿರುವುದು, ಎರಡು ಮೀಟರ್ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬೇಡಿ ಎಂದು ನೆನಪಿಸಿದ್ದಾರೆ.
ಕಳೆದ ಮೇ ತಿಂಗಳಲ್ಲಿ ದೇಶದಲ್ಲಿ 50 ಸಾವಿರವಿದ್ದ ಕೊರೋನಾ ಸೋಂಕಿತರ ಸಂಖ್ಯೆ ಅಕ್ಟೋಬರ್ ಗೆ 57 ಲಕ್ಷಕ್ಕೆ ತಲುಪಿದೆ. ಈ ಮಧ್ಯೆ ಗುಣಮುಖ ಹೊಂದುತ್ತಿರುವವರ ಸಂಖ್ಯೆ ಕೂಡ ಜಾಸ್ತಿಯಾಗುತ್ತಿದೆ. ಪ್ರತಿದಿನ 75 ಸಾವಿರಕ್ಕೂ ಹೆಚ್ಚು ಮಂದಿ ಗುಣಮುಖರಾಗುತ್ತಿದ್ದಾರೆ. ಪ್ರಸ್ತುತ ಸಕ್ರಿಯ ಕೇಸುಗಳು ಶೇಕಡಾ 13.4ರಷ್ಟಿದ್ದರೆ ಗುಣಮುಖರಾಗುತ್ತಿರುವವರ ಸಂಖ್ಯೆ 6.3ರಷ್ಟಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಟ್ವೀಟ್ ಮಾಡಿದೆ.