ಮಾಸ್ಕ್ ಧರಿಸುವುದರಿಂದಾಗಿ ಕೋವಿಡ್-19 ರೋಗ ಹರಡುವುದನ್ನು ತಡೆಗಟ್ಟಬಹುದು ಎಂಬುದು ಸಾಬೀತಾಗಿದೆ. ಆದರೆ ದೀರ್ಘಾವಧಿ ಮಾಸ್ಕ್ ಧರಿಸುವುದರಿಂದ ವ್ಯಕ್ತಿಗಳಲ್ಲಿ ಆಮ್ಲಜನಕ ಕೊರತೆಯುಂಟಾಗಿ ಹೆಚ್ಚು ಸಿಒ2 (ಕಾರ್ಬನ್ ಡೈಆಕ್ಸೈಡ್) ಸೇವನೆಯಾಗಲಿದ್ದು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ ಎಂಬ ವದಂತಿಗಳು ಹಬ್ಬಿದ್ದವು.
ಈ ಬಗ್ಗೆ ಅನ್ನಲ್ಸ್ ಆಫ್ ದ ಅಮೆರಿಕನ್ ಥೊರಾಸಿಕ್ ಸೊಸೈಟಿ ಅಧ್ಯಯನ ನಡೆಸಿದ್ದು, ವರದಿ ಪ್ರಕಟಿಸಿದೆ. ಉಸಿರಾಟಕ್ಕೆ ಅಡ್ಡಿಪಡಿಸುವ ಸಿಒಪಿಡಿ ಸಮಸ್ಯೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಹಾಗೂ ಆರೋಗ್ಯಯುತವಾಗಿರುವ ವ್ಯಕ್ತಿಗಳಿಗೂ ದೀರ್ಘ ಕಾಲ ಮಾಸ್ಕ್ ಧರಿಸುವುದರಿಂದ ಆಮ್ಲಜನಕ ಪೂರೈಕೆ ಕೊರತೆ ಉಂಟಾಗಿ ಹೆಚ್ಚು ಸಿಒ2 (ಕಾರ್ಬನ್ ಡೈಆಕ್ಸೈಡ್) ಸೇವನೆಯಾಗಲಿದೆ ಇದರಿಂದಾಗಿ ಉಸಿರಾಟಕ್ಕೆ ಅಡ್ಡಿಯಾಗುವ ಸಮಸ್ಯೆಗಳು ಮತ್ತಷ್ಟು ಉಲ್ಬಣವಾಗಲಿದೆ ಎಂದು ಫ್ಲೋರಿಡಾ ಮುಂತಾದ ಪ್ರದೇಶಗಳಲ್ಲಿ ವದಂತಿ ಹಬ್ಬಿಸಲಾಗಿತ್ತು.
ಆದರೆ ಅಮೆರಿಕದ ಥೊರಾಸಿಕ್ ಸೊಸೈಟಿಯ ತಜ್ಞರಾದ ಮೈಕಲ್ ಕ್ಯಾಂಪೋಸ್ ಈ ಅಂಶಗಳನ್ನು ಅಲ್ಲಗಳೆದಿದ್ದು, ಮಾಸ್ಕ್ ಧರಿಸುವುದರಿಂದ ಉಸಿರಾಟಕ್ಕೆ ಸಂಬಂಧಿಸಿದ ಅಪಾಯಗಳೂ ಸಂಭವಿಸುವುದಿಲ್ಲ ಎಂದು ಹೇಳಿದ್ದಾರೆ.
ಮಾಸ್ಕ್ ಧರಿಸಿದಾಗ ಗಾಳಿಯ ಸುಗಮ ಸಂಚಾರಕ್ಕೆ ಸ್ವಲ್ಪ ಅಡೆತಡೆ ಉಂಟಾಗಬಹುದು ಈ ವೇಳೆ ಕಿರಿಕಿರಿ ಆಗುವುದು ಸಹಜ ಆದರೆ ಮಾಸ್ಕ್ ಧರಿಸುವುದರಿಂದ ಉಸಿರಾಟದ ತೊಂದರೆ, ಸಿಒಪಿಡಿ ಸಮಸ್ಯೆ ಉಲ್ಬಣವಾಗುವುದಿಲ್ಲ, ಮಾಸ್ಕ್ ಧರಿಸುವುದರಿಂದ ಉಂಟಾಗುವ ಲಾಭಗಳನ್ನು ಜನತೆ ನಿರ್ಲಕ್ಷ್ಯಿಸಬಾರದು ಎಂದು ತಜ್ಞರು ಹೇಳಿದ್ದಾರೆ.