ದುಬೈ: ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಗಳ ನಡುವೆ ನಡೆದ ಹಣಾಹಣಿಯಲ್ಲಿ ಬೆಂಗಳೂರು ತಂಡ 37 ರನ್‌ಗಳ ಭರ್ಜರಿ ಜಯ ಸಾಧಿಸಿತು.
ಹಾಲಿ ವರ್ಷದ ಟೂರ್ನಿಯಲ್ಲಿ ಇದು ಆರ್ ಸಿಬಿಗೆ 4ನೇ ಜಯವಾಗಿದೆ. ಕೊಹ್ಲಿ ಪಡೆ ನೀಡಿದ 170 ರನ್‌ಗಳ ಗುರಿಯನ್ನು ಬೆನ್ನು ಹತ್ತಿದ ಮಹೇಂದ್ರ ಸಿಂಗ್ ಧೋನಿ ಪಡೆ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು. ಆ ಮೂಲಕ 37 ರನ್ ಗಳ ಅಂತರದಲ್ಲಿ ಹೀನಾಯ ಸೋಲು ಕಂಡಿತು. ಆರ್ ಸಿಬಿ ನೀಡಿದ ಸವಾಲಿನ ಗುರಿಯನ್ನು ಬೆನ್ನು ಹತ್ತಿದ ಸಿಎಸ್ ಕೆ ಆರಂಭಿಕ ಆಘಾತ ಎದುರಿಸಿತು. 8ರನ್ ಗಳಿಸಿದ ಡುಪ್ಲೆಸಿಸ್ ವಾಷಿಂಗ್ಟನ್ ಸುಂದರ್ ಗೆ ವಿಕೆಟ್ ಒಪ್ಪಿಸಿದರು. ಬಳಿಕ ಶೇನ್ ವಾಟ್ಸನ್ ಕೂಡ 14ರನ್ ಗಳಿಸಿ ವಾಷಿಂಗ್ಟನ್ ಸುಂದರ್ ಗೆ ಕ್ಲೀನ್ ಬೋಲ್ಡ್ ಆದರು.
5 ಓವರ್‌ಗಳಲ್ಲಿ 6 ವಿಕೆಟ್
ಚೆನ್ನೈ ಸೂಪರ್ ಕಿಂಗ್ಸ್ ತಂಡ 15 ರಿಂದ 20 ಓವರ್‌ಗಳಲ್ಲಿ 43 ರನ್ ಗಳಿಸಿ ಒಟ್ಟು 6 ವಿಕೆಟ್‌ಗಳನ್ನು ಕಳೆದುಕೊಂಡಿತು. ಸೈನಿ ಎಸೆದ 15ನೇ ಓವರ್‌ನಲ್ಲಿ ಜಗದೀಶನ್ ರನೌಟ್ ಅದರೆ, ಚಾಹಲ್ ಹಾಕಿದ 16 ಧೊನಿ ಔಟಾದರು. ಕ್ರಿಸ್ ಮೋರಿಸ್ ಹಾಕಿದ 17ನೇ ಓವರ್‌ನಲ್ಲಿ ಸ್ಯಾಮ್ ಕರನ್ ಮತ್ತು ಇಸುರು ಉದಾನ ಎಸೆದ 18ನೇ ಓವರ್ ಅಂಬಟಿ ರಾಯುಡು ವಿಕೆಟ್ ಒಪ್ಪಿಸಿದರು. ಕ್ರಿಸ್ ಮೋರಿಸ್ ಬೌಲ್ ಮಾಡಿದ 19ನೇ ಓವರ್‌ನಲ್ಲಿ ರವೀಂದ್ರ ಜಡೇಜಾ ಮತ್ತು ಡ್ವೇನ್ ಬ್ರಾವೋ ಔಟಾದರು. ಅಂತಿಮವಾಗಿ ಚೆನ್ನೈ ತಂಡ 8 ವಿಕೆಟ್ ನಷ್ಟಕ್ಕೆ 132 ರನ್ ಗಳನ್ನಷ್ಟೇ ಗಳಿಸಲು ಶಕ್ತವಾಯಿತು.
ವಿರಾಟ್ ಕೊಹ್ಲಿ ಅಬ್ಬರದ ಅರ್ಧಶತಕ : ಚೆನ್ನೈ ಸೂಪರ್ ಕಿಂಗ್ಸ್‌ಗೆ 170 ರನ್‌ಗಳ ಗುರಿ
ಇದಕ್ಕೂ ಮೊದಲು ಮೊದಲು ಬ್ಯಾಟಿಂಗ್ ಮಾಡಿದ ಆರ್ ಸಿಬಿ ನಾಯಕ ವಿರಾಟ್ ಕೊಹ್ಲಿ(ಅಜೇಯ 90 ರನ್‌ಗಳು) ಅವರ ಮೌಲ್ಯಯುತ ಅರ್ಧಶತಕದ ನೆರವಿನಿಂದ ರಾಯಲ್ ಚಾಲೆಂಜರ್ಸ್ ಬೆಂಗಳೂರು 13ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿಯನ್ನು ನೀಡಿತು. ರಾಯಲ್ ಚಾಲೆಂಜರ್ಸ್ ತಂಡ ನಿಗದಿತ 20 ಓವರ್‌ಗಳಿಗೆ 4 ವಿಕೆಟ್‌ಗಳನ್ನು ಕಳೆದುಕೊಂಡು 169 ರನ್‌ಗಳನ್ನು ಗಳಿಸಿದ್ದು, ಚೆನ್ನೈ ಸೂಪರ್ ಕಿಂಗ್ಸ್‌ಗೆ 170 ರನ್‌ಗಳ ಸ್ಪರ್ಧಾತ್ಮ ಗುರಿಯನ್ನು ನೀಡಿದೆ. ಆರಂಭಿಕರಾಗಿ ಕಣಕ್ಕೆ ಇಳಿದ ಆರೋನ್ ಫಿಂಚ್ ಹಾಗೂ ದೇವದತ್ ಪಡಿಕ್ಕಲ್ ಜೋಡಿ, ಚೆನ್ನೈ ಸೂಪರ್ ಕಿಂಗ್ಸ್ ಶಿಸ್ತುಬದ್ಧ ಬೌಲಿಂಗ್ ದಾಳಿಯನ್ನು ಮೆಟ್ಟಿ ನಿಲ್ಲುವಲ್ಲಿ ವಿಫಲವಾಯಿತು. ಆರಂಭದಲ್ಲಿಯೇ ಹೆಣಗಾಡುತ್ತಿದ್ದ ಆರೋನ್ ಫಿಂಚ್(2), ದೀಪಕ್ ಚಹರ್‌ಗೆ ಕ್ಲೀನ್ ಬೌಲ್ಡ್ ಆದರು. ನಂತರದ ಜತೆಯಾದ ದೇವದತ್ ಪಡಿಕ್ಕಲ್ ಹಾಗೂ ನಾಯಕ ವಿರಾಟ್ ಕೊಹ್ಲಿ ಜೋಡಿ ಎರಡನೇ ವಿಕೆಟ್‌ಗೆ 53 ರನ್‌ಗಳನ್ನು ಗಳಿಸಿತು.
ಸಮಯೋಜಿತ ಬ್ಯಾಟಿಂಗ್ ಮಾಡುತ್ತಿದ್ದ ದೇವದತ್ ಪಡಿಕ್ಕಲ್ 34 ಎಸೆತಗಳಲ್ಲಿ 33 ರನ್‌ಗಳನ್ನು ಗಳಿಸಿ ಶಾರ್ದೂಲ್ ಠಾಕೂರ್ ಎಸೆತದಲ್ಲಿ ಫಾಫ್ ಡುಪ್ಲೆಸಿಸ್‌ಗೆ ಕ್ಯಾಚ್ ನೀಡಿದರು. ನಂತರ ಕ್ರೀಸ್‌ಗೆ ಬಂದ ಎಬಿ ಡಿವಿಲಿಯರ್ಸ್ ಶೂನ್ಯ ಸಂಪಾದನೆಯಲ್ಲಿ ಶಾರ್ದೂಲ್ ಠಾಕೂರ್‌ಗೆ ಕ್ಲೀನ್ ಬೌಲ್ಡ್ ಆದರು. ವಾಷಿಂಗ್ಟನ್ ಸುಂದರ್ 10 ರನ್ ಗಳಿಸಿ ಸ್ಯಾಮ್ ಕರನ್‌ಗೆ ವಿಕೆಟ್ ಕೊಟ್ಟರು.ಒಂದು ತುದಿಯಲ್ಲಿ ಅದ್ಭುತ ಬ್ಯಾಟಿಂಗ್ ಮಾಡಿದ ನಾಯಕ ವಿರಾಟ್ ಕೊಹ್ಲಿ ಚೆನ್ನೈ ಬೌಲರ್‌ಗಳನ್ನು ಬೆವರಿಳಿಸಿದರು. ಆಡಿದ 52 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಹಾಗೂ ನಾಲ್ಕು ಬೌಂಡರಿ ನೆರವಿನೊಂದಿಗೆ 52 ಎಸೆತಗಳಲ್ಲಿ ಅಜೇಯ 90 ರನ್‌ಗಳನ್ನು ದಾಖಲಿಸಿದರು. ಆ ಮೂಲಕ ತಂಡದ ಮೊತ್ತ 160 ರ ಗಡಿ ದಾಟುವಲ್ಲಿ ನೆರವಾದರು. ಕೊನೆಯಲ್ಲಿ ಅಬ್ಬರದ ಬ್ಯಾಟಿಂಗ್ ಮಾಡಿದ ಶಿವಮ್ ದುಬೆ 14 ಎಸೆತಗಳಲ್ಲಿ ಒಂದು ಸಿಕ್ಸರ್ ಹಾಗೂ ಎರಡು ಬೌಂಡರಿಯೊಂದಿಗೆ 22 ರನ್‌ಗಳನ್ನು ಚಚ್ಚಿದರು. ಕೊಹ್ಲಿ ಹಾಗೂ ಶಿವಮ್ ದುಬೆ ಐದನೇ ವಿಕೆಟ್‌ಗೆ 34 ಎಸೆತಗಳಲ್ಲಿ 76 ರನ್ ಜತೆಯಾಟ ದಾಖಲಿಸಿದರು. ಅಂತಿಮವಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 169 ರನ್‌ಗಳನ್ನು ಗಳಿಸಿತು. ಚೆನ್ನೈ ಸೂಪರ್ ಕಿಂಗ್ಸ್ ಪರ ಅದ್ಭುತ ಬೌಲಿಂಗ್ ಮಾಡಿದ ದೀಪಕ್ ಚಹರ್ ನಾಲ್ಕು ಓವರ್‌ಗಳಿಗೆ 10 ರನ್‌ಗಳನ್ನು ನೀಡಿ ಒಂದು ವಿಕೆಟ್ ಪಡೆದರು. ಶಾದೂರ್ಲ್ ಠಾಕೂರ್ 4 ಓವರ್‌ಗಳಿಗೆ 40 ರನ್‌ಗಳನ್ನು ನೀಡಿ ಎರಡು ವಿಕೆಟ್ ಪಡೆದರು.