ದುಬೈ: ಐಪಿಎಲ್ 2020 ಟೂರ್ನಿಯ ಇಂದಿನ 2ನೇ ಪಂದ್ಯದಲ್ಲಿ ಬಲಿಷ್ಠ ಮುಂಬೈ ಇಂಡಿಯನ್ಸ್ ತಂಡ ದೆಹಲಿ ಕ್ಯಾಪಿಟಲ್ಸ್ ವಿರುದ್ಧ 5 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಡೆಲ್ಲಿ ಕ್ಯಾಪಿಟಲ್ಸ್ ನೀಡಿದ 163 ರನ್ ಗುರಿಯನ್ನು ಹಾಲಿ ಚಾಂಪಿಯನ್ ಮುಂಬೈ ತಂಡ ಇನ್ನೂ 5 ವಿಕೆಟ್‌ಗಳು ಬಾಕಿ ಇರುವಂತೆಯೇ ತಲುಪಿತು. 163ರನ್ ಗಳ ಸವಾಲಿನ ಗುರಿ ಬೆನ್ನತ್ತಿದ ಮುಂಬೈ ತಂಡ ಆರಂಭದಲ್ಲೇ ನಾಯಕ ರೋಹಿತ್ ಶರ್ಮಾ (5) ವಿಕೆಟ್ ಕಳೆದುಕೊಂಡಿತು. ಆದರೆ ಕ್ವಿಂಟನ್ ಡಿ ಕಾಕ್ ಮತ್ತು ಸೂರ್ಯಕುಮಾರ್ ಯಾದವ್ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶನ ನೀಡಿ, ಮುಂಬೈ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ಡಿ ಕಾಕ್ 36 ಎಸೆತಗಳಲ್ಲಿ 3 ಸಿಕ್ಸರ್, 4 ಬೌಂಡರಿ ಸಹಿತ 53 ರನ್ ಗಳಿಸಿದರೆ,
ಯಾದವ್ 32 ಎಸೆತಗಳಲ್ಲಿ 6 ಬೌಂಡರಿ, 2 ಸಿಕ್ಸರ್ ಸಹಿತ 53 ರನ್ ಬಾರಿಸಿದರು. ಬಿರುಸಾಗಿ ಬ್ಯಾಟ್ ಬೀಸಿದ ಇಶಾನ್ ಕಿಶನ್ (28) ತಮ್ಮ ತಂಡವನ್ನು ಜಯದ ಸನಿಹಕ್ಕೆ ತಂದು ನಿಲ್ಲಿಸಿದರು. ಕೊನೆಯಲ್ಲಿ ಕೀರನ್ ಪೊಲಾರ್ಡ್ (11) ಮತ್ತು ಕೃಣಾಲ್ ಪಾಂಡ್ಯ (12) ಗೆಲುವಿನ ಔಪಚಾರಿಕತೆ ಪೂರ್ಣಗೊಳಿಸಿದರು. ಡೆಲ್ಲಿ ಪರ ಕಗಿಸೊ ರಬಾಡ 2 ವಿಕೆಟ್ ಪಡೆದರೆ, ಅಕ್ಷರ್ ಪಟೇಲ್, ಆರ್.ಅಶ್ವಿನ್ ಮತ್ತು ಮಾರ್ಕಸ್ ಸ್ಟೋಯಿನಸ್ ತಲಾ ಒಂದೊಂದು ವಿಕೆಟ್ ಹಂಚಿಕೊಂಡರು.
ಇದಕ್ಕೂ ಮೊದಲು ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಡೆಲ್ಲಿ, ನಾಯಕ ಶ್ರೇಯಸ್ ಅಯ್ಯರ್ (42) ಹಾಗೂ ಅನುಭವಿ ಶಿಖರ್ ಧವನ್ (69) ಅವರ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ಕಳೆದುಕೊಂಡು 162 ರನ್ ಗಳಿಸಿತ್ತು.
ಅಗ್ರಸ್ಥಾನಕ್ಕೇರಿದ ಮುಂಬೈ
ಈ ಜಯದೊಂದಿಗೆ ಮುಂಬೈ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದೆ. ಹಾಲಿ ಟೂರ್ನಿಯಲ್ಲಿ ಒಟ್ಟು 7 ಪಂದ್ಯಗಳನ್ನಾಡಿರುವ ಮುಂಬೈ ಐದು ಪಂದ್ಯಗಳಲ್ಲಿ ಗೆದ್ದು, 2 ಪಂದ್ಯಗಳಲ್ಲಿ ಸೋತಿದೆ. ಅಂತೆಯೇ ಒಟ್ಟು 10 ಅಂಕಗಳೊಂದಿಗೆ ಅಗ್ರ ಸ್ಥಾನದಲ್ಲಿದೆ. ಇನ್ನು 7 ಪಂದ್ಯಗಳನ್ನಾಡಿ 5ರಲ್ಲಿ ಗೆಲುವು ಮತ್ತು 2ರಲ್ಲಿ ಸೋಲು ಕಂಡಿರುವ ದೆಹಲಿ 10 ಅಂಕಗಳೊಂದಿಗೆ 2ನೇ ಸ್ಥಾನಕ್ಕೆ ಕುಸಿದಿದೆ. 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಮತ್ತು 2ರಲ್ಲಿ ಸೋಲು ಕಂಡಿರುವ ಕೋಲ್ಕತಾ ತಂಡ 3ನೇ ಸ್ಥಾನದಲ್ಲಿದ್ದು, 6 ಪಂದ್ಯಗಳ ಪೈಕಿ 4ರಲ್ಲಿ ಗೆಲುವು ಮತ್ತು 2ರಲ್ಲಿ ಸೋಲು ಕಂಡಿರುವ ಆರ್ ಸಿಬಿ 4ನೇ ಸ್ಥಾನದಲ್ಲಿದೆ.